ರಚಿತಾ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದ್ದು ಯಾಕೆ?

Rachita Ram Final
Published on

ರಚಿತಾ ರಾಮ್ ಪಾಲಿಗೆ ಮೇ 10, ಮರೆಯಲಾಗದ ದಿನ ಎಂದರೆ ತಪ್ಪಿಲ್ಲ. ಅಂದೇನು ಅವರ ಬರ್ಥ್‌ಡೇ ಇತ್ತಾ ಎಂಬ ಪ್ರಶ್ನೆ ಖಂಡಿತವಾಗಿಯೂ ಬಂದೇ ಬರುತ್ತದೆ. ಹಾಗೇನಿಲ್ಲ, ರಚಿತಾ ಹುಟ್ಟುಹಬ್ಬವಿರುವುದು ಅಕ್ಟೋಬರ್‌ನಲ್ಲಿ. ಆದರೂ, ಮೇ 10 ಅವರ ಪಾಲಿಗೆ ಮರೆಯಲಾಗದ ದಿನ. ಅದಕ್ಕೆ ಕಾರಣ, ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ಬುಲ್‌ಬುಲ್’ ಅದೇ ದಿನ ಬಿಡುಗಡೆಯಾಗಿತ್ತು.

ಹೌದು, ಸುಮಾರು ಏಳು ವರ್ಷಗಳ ಹಿಂದೆ, ಅಂದರೆ 2013ರ ಮೇ 10ರಂದು ‘ಬುಲ್‌ಬುಲ್’ ಬಿಡುಗಡೆಯಾಗಿದ್ದು, ರಚಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಏಳು ವರ್ಷಗಳಾಗಿವೆ. ಏಳು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಚಿತಾ, ತಮ್ಮನ್ನು ಸಪೋರ್ಟ್ ಮಾಡಿದ ಎಲ್ಲರಿಗೂ ಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

‘ನನ್ನ ಕಲಾ ಬದುಕಿಗೆ ಏಳು ವರ್ಷಗಳು ತುಂಬಿವೆ ಅಂದರೆ, ನಂಬೋದಕ್ಕೆ ಆಗ್ತಿಲ್ಲ. ನನ್ನನ್ನು ಸಿನಿಮಾರಂಗಕ್ಕೆ ಪರಿಚಯಿಸಿದ ತೂಗುದೀಪ ಪ್ರೊಡಕ್ಷನ್ಸ್‌ಗೆ ಸದಾ ಚಿರಋಣಿಯಾಗಿರುತ್ತೇನೆ’ ಎಂದು ರಚಿತಾ ಟ್ವೀಟ್ ಮಾಡಿದ್ದಾರೆ.

ಬರೀ ತೂಗುದೀಪ ಪ್ರೊಡಕ್ಷನ್ಸ್ ಅಷ್ಟೇ ಅಲ್ಲ, ತಮಗೆ ಸಹಕರಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿರುವ ರಚಿತಾ, ‘‘ಬುಲ್‌ಬುಲ್’ನಿಂದ ಇಟ್ಟ ಹೆಜ್ಜೆ ಇಂದಿಗೂ ಮಾಸಿಲ್ಲ. ಅದಕ್ಕೆ ಕಾರಣ ನನ್ನ ತಂದೆ-ತಾಯಿಯ ನಂಬಿಕೆ, ದೇವರ ಅನುಗ್ರಹ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಆಶೀರ್ವಾದ. ಈ ಪಯಣದಲ್ಲಿ ಕಲಿತ ಪಾಠಗಳು, ಅರಿತ ಮನಸ್ಸುಗಳು, ಪ್ರತಿಯೊಂದು ಸಿನಿಮಾದ ನೆನಪುಗಳು ನೆನೆಸಿಕೊಂಡ್ರೆ ಕಣ್ತುಂಬಿ ಬರುತ್ತೆ. ನನ್ನ ಸಿನಿ ಬದುಕಿನಲ್ಲಿ ನನಗೆ ಮಾರ್ಗದರ್ಶಿಗಳಾಗಿ ನಿಂತ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸ್ತೀನಿ’ ಎಂದು ರಚಿತಾ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.

ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’, ರಮೇಶ್ ಅರವಿಂದ್ ನಿರ್ದೇಶನದ ‘100’ ಮುಂತಾದ ಚಿತ್ರಗಳಲ್ಲಿ ರಚಿತಾ ನಟಿಸಿದ್ದು, ಆ ಚಿತ್ರಗಳು ಬಿಡುಗಡೆಯಾಗಬೇಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net