

ನವದೆಹಲಿ: ಪವರ್ ಹಿಟ್ಟಿಂಗ್ ಬ್ಯಾಟ್ಸ್ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಕಳೆದ ಭಾನುವಾರವಷ್ಟೇ ಮುಗಿದ ಐಪಿಎಲ್ನಲ್ಲಿ ಅಬ್ಬರಿಸಿ ಬೊಬ್ಬಿರಿದ ಸುದ್ದಿ ಕ್ರೀಡಾಭಿಮಾನಿಗಳಿಗೆ ತಿಳಿದೇ ಇದೆ. ಇಂಗ್ಲೆಂಡ್ ದಾಂಡಿಗ ಲಿವಿಂಗ್‌ಸ್ಟೋನ್ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ 14 ಪಂದ್ಯಗಳಲ್ಲಿ 182.08 ಸರಾಸರಿಯಲ್ಲಿ 427 ರನ್ ಬಾರಿಸಿ ಎಲ್ಲರ ಗಮನ ಸೆಳೆದರು.
ತಮ್ಮ ಬ್ಯಾಟಿಂಗ್ ಲಯವನ್ನು ಮುಂದುವರಿಸಿರುವ ಲಿವಿಂಗ್ ಸ್ಟೋನ್, ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ವೈಟಾಲಿಟಿ ಬ್ಲ್ಯಾಸ್ಟ್ ಪಂದದಲ್ಲೂ ಮುಂದುವರಿಸಿದ್ದಾರೆ. ಬುಧವಾರ ಮ್ಯಾಂಚೆಸ್ಟರ್ನಲ್ಲಿ ಡರ್ಬಿಶೈರ್ ವಿರುದ್ಧ ನಡೆದ ಪಂದ್ಯದಲ್ಲಿ ಲಾಂಚಶೈರ್ ಪರ ಬ್ಯಾಟ್ ಬೀಸಿದ ಲಿವಿಂಗ್‌ಸ್ಟೋನ್, ಕೇವಲ 40 ಎಸೆತಗಳಲ್ಲಿ 75 ರನ್ ಗಳಿಸಿದರು. ಅಂತಿಮವಾಗಿ ಡಾನೆ ವಿಲಾಸ್ ನೇತೃತ್ವದ ಲಾಂಚಶೈರ್ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 219ರನ್ ಕಲೆಹಾಕುವ ಮೂಲಕ ಅಂತಿಮವಾಗಿ 17 ರನ್ಗಳ ಅಂತರದಿಂದ ಜಯ ಸಾಧಿಸಿತು.
ಐಪಿಎಲ್ನಲ್ಲಿ ಬಿಗ್ ಸಿಕ್ಸರ್ನಿಂದಲೇ ಸುದ್ದಿಯಾಗಿರುವ ಲಿವಿಂಗ್‌ಸ್ಟೋನ್, ಈ ಪಂದ್ಯದಲ್ಲೂ ಬಿಗ್ ಸಿಕ್ಸರ್ ಬಾರಿಸಿದರು. ಈ ವೇಳೆ ವಿನೂತಕ ಕ್ಷಣಕ್ಕೆ ಪಂದ್ಯ ಸಾಕ್ಷಿಯಾಯಿತು. 28 ವರ್ಷದ ಲಿವಿಂಗ್‌ಸ್ಟೋನ್ 14 ಎಸೆತದಲ್ಲಿ 21 ರನ್ ಕಲೆಹಾಕಿದ್ದ ಸಂದರ್ಭದಲ್ಲಿ ಸ್ಕಾಟಿಶ್ ಎಡಗೈ ಸ್ಪಿನ್ನರ್ ಮಾರ್ಕ್ ವ್ಯಾಟ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ ವಿಭಾಗದಲ್ಲಿ ದೊಡ್ಡ ಸಿಕ್ಸರ್ ಸಿಡಿಸಿದರು. ಗಾಳಿಯಲ್ಲಿ ಹಾರಿದ ಚೆಂಡು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಹೋಗಿ ಬಿದ್ದಿತು.
ಚೆಂಡು ಎದುರುಗಡೆ ಕಾಣುತ್ತಿದ್ದರು ಅಡ್ಡ ಬೇಲಿಯಿದ್ದ ಕಾರಣ ಅದನ್ನು ತೆಗೆದುಕೊಳ್ಳಲು ಎದುರು ನೋಡುವಾಗ ಸ್ಥಳಕ್ಕೆ ಬಂದ ಕಟ್ಟಡ ನಿರ್ಮಾಣ ಕಾರ್ಮಿಕರು ಚೆಂಡನ್ನು ತೆಗೆದುಕೊಟ್ಟರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ವೈಟಾಲಿಟಿ ಬ್ಲ್ಯಾಸ್ಟ್ ಟ್ವೀಟ್ ಮಾಡಿದ್ದು, ಭಾರೀ ವೈರಲ್ ಆಗಿದೆ. ಅಲ್ಲದೆ, ಲಿವಿಂಗ್‌ಸ್ಟೋನ್ ಬಿಗ್ ಸಿಕ್ಸರ್ ಕಂಡು ಕ್ರೀಡಾಭಿಮಾನಿಗಳು ಪುಳಕಿತರಾಗಿದ್ದಾರೆ.
ಅಂದಹಾಗೆ ಲಿವಿಂಗ್‌ಸ್ಟೋನ್ ದೊಡ್ಡ ಸಿಕ್ಸರ್‌ಗಳನ್ನು ಬಾರಿಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಕೊನೆಗೊಂಡ ಐಪಿಎಲ್ 2022ರಲ್ಲಿ, ಗುಜರಾತ್ ಟೈಟಾನ್ಸ್‌ನ ಮೊಹಮ್ಮದ್ ಶಮಿ ಅವರ ಎಸೆತದಲ್ಲಿ ಲಿವಿಂಗ್‌ಸ್ಟೋನ್ 117 ಮೀ ಸಿಕ್ಸರ್ ಬಾರಿಸಿ ಎಲ್ಲರ ಹುಬ್ಬೇರಿಸಿದ್ದರು. (ಏಜೆನ್ಸೀಸ್)