ಧೋನಿಯೊಂದಿಗಿನ ಬಾಂಧವ್ಯವನ್ನು ಎರಡೇ ಪದದಲ್ಲಿ ವಿವರಿಸಿದ ಕೊಹ್ಲಿಗೆ ನೆಟ್ಟಿಗರ ಮೆಚ್ಚುಗೆ!

Kohli
Published on

ನವದೆಹಲಿ: ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬಿಡುವಿನ ಸಮಯದಲ್ಲಿ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಸಂವಾದದ ವೇಳೆ ಅಭಿಮಾನಿಯೊಬ್ಬ ಧೋನಿ ಬಗ್ಗೆ ಕೇಳಿದ ಪ್ರಶ್ನೆಗೆ ಕೊಹ್ಲಿ ಕೊಟ್ಟ ಉತ್ತರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಜೂನ್​ 18ರಿಂದ ಆರಂಭವಾಗುವ ನ್ಯೂಜಿಲೆಂಡ್​ ವಿರುದ್ಧದ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಹಾಗೂ 6 ಟೆಸ್ಟ್​ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ವಿರಾಟ್​ ಸದ್ಯ ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ.

ಶನಿವಾರ ಅಭಿಮಾನಿಗಳೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಸಂವಹನ ನಡೆಸಿದ ಕೊಹ್ಲಿ, ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ವೇಳೆ ಧೋನಿ ಮತ್ತು ನಿಮ್ಮ ನಡುವಿನ ಬಾಂದವ್ಯದ ಬಗ್ಗೆ ಹೇಳಿ ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ "ನಂಬಿಕೆ" ಮತ್ತು "ಗೌರವ" ಇದೆ ಎನ್ನುವ ಮೂಲಕ ಕೊಹ್ಲಿ ಬಹಳ ಸೊಗಸಾಗಿ ಉತ್ತರಿಸಿದರು.

ನೀವು ಟೀಕೆ ಅಥವಾ ಹೊಗಳಿಕೆ ಯಾವುದನ್ನು ಇಷ್ಟಪಡುತ್ತೀರಾ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, ಅದು ನಕಲಿಯಲ್ಲದಿದ್ದರೆ, ರಚನಾತ್ಮಕ ಟೀಕೆ ಮತ್ತು ನಿಜವಾದ ಅಭಿನಂದನೆಗಳನ್ನು ಇಷ್ಟಪಡುತ್ತೇನೆಂದು ಹೇಳಿದರು.

ಕಳೆದ ವರ್ಷ ರವಿಚಂದ್ರನ್​ ಅಶ್ವಿನ್​ ಜತೆ ನಡೆದ ಇನ್​ಸ್ಟಾಗ್ರಾಂ ಲೈವ್​ನಲ್ಲೂ ಧೋನಿಯವರನ್ನು ಕೊಹ್ಲಿ ಹೊಗಳಿದ್ದರು. ನಾನು ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿಕೊಳ್ಳುವಲ್ಲಿ ಧೋನಿ ಅವರ ಪಾತ್ರ ಬಹುದೊಡ್ಡದು ಎಂದಿದ್ದರು.

ಜವಾಬ್ದಾರಿಗಳನ್ನು ತೆಗೆದುಕೊಳ್ಳುವಲ್ಲಿ ನನಗೆ ತುಂಬಾ ಒಲವಿದೆ. ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ನನ್ನ ಗಮನವೆಲ್ಲ 11 ಆಟಗಾರರ ಪಟ್ಟಿಯಲ್ಲಿ ನಾನಿರಬೇಕೆಂದು ಬಯಸುತ್ತಿದೆ. ನಾನು ಯಾವಾಗಲೂ ಎಂಎಸ್ ಧೋನಿ ಕಿವಿಯಲ್ಲಿ ವಿಭಿನ್ನ ತಂತ್ರಗಳನ್ನು ಚರ್ಚಿಸುತ್ತಿದ್ದೆ. ಅವರಿಂದಲೇ ನನಗೆ ತುಂಬಾ ಆತ್ಮವಿಶ್ವಾಸ ಬಂದಿತು. ನಾಯಕತ್ವ ವಿಚಾರ ಬಂದಾಗ ನನ್ನ ವೃತ್ತಿ ಜೀವನದಲ್ಲಿ ಧೋನಿ ಪಾತ್ರ ದೊಡ್ಡದು ಎಂದು ಕೊಹ್ಲಿ ಪ್ರಶಂಸಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net