ಒಂದೇ ಫ್ರೇಮ್​ನಲ್ಲಿ ಸೆರೆಯಾದ ಮೂರು ನಾಗರಹಾವುಗಳ ಅದ್ಭುತ ಫೋಟೋ​! ನೆಟ್ಟಿಗರು ಹೇಳಿದ್ದು ಹೀಗೆ..

Cobra
Published on

ಮುಂಬೈ: ನಮ್ಮ ಭಾರತದ ಕಾಡುಗಳು ವೈವಿಧ್ಯಮಯ ಅದ್ಭುತಗಳಿಂದ ತುಂಬಿವೆ. ನಮ್ಮ ಅರಣ್ಯ ಪ್ರದೇಶಗಳಲ್ಲಿ ಆಶ್ಚರ್ಯಗಳಿಗೇನೂ ಕೊರತೆಯಿಲ್ಲ, ಏಕೆಂದರೆ ಭಾರತವು ಸಸ್ಯ ಮತ್ತು ಪ್ರಾಣಿಗಳ ಶ್ರೇಷ್ಠ ನೆಲೆಯಾಗಿದೆ. ಹೀಗಾಗಿಯೇ ಆಗಾಗ ಪ್ರಾಣಿ-ಪಕ್ಷಿಗಳ ಅದ್ಭುತ ಫೋಟೋ-ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಒಂದೇ ಫೋಟೋದಲ್ಲಿ ಮೂರು ನಾಗರಹಾವುಗಳ ಸರೆಯಾಗಿರುವ ಅದ್ಭುತ ಫೋಟೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ.

ನಿನ್ನೆ ಇಂಡಿಯನ್ ವೈಲ್ಡ್ ಲೈಫ್ ಹೆಸರಿನ ಫೇಸ್​ಬುಕ್ ಗ್ರೂಪ್​ನಲ್ಲಿ ನಾಗರಹಾವುಗಳ ಫೋಟೋಗಳು ಮೊದಲು ಕಾಣಿಸಿಕೊಂಡಿವೆ. ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ನಂತರ ಅವುಗಳ ಫೋಟೋವನ್ನು ಕ್ಲಿಕ್ಕಿಸಲಾಗಿದೆ ಎಂದು ವರದಿಯಾಗಿದೆ. ರಾಜೇಂದ್ರ ಸೆಮಾಲ್ಕರ್ ಎಂಬ ಫೇಸ್​ಬುಕ್​ ಬಳಕೆದಾರರು ಅಮರಾವತಿ ಜಿಲ್ಲೆಯ ಹರಿಸಾಲ್ ಅರಣ್ಯದಲ್ಲಿ ಮರದ ಕಾಂಡದ ಸುತ್ತಲೂ ಮೂರು ನಾಗರಹಾವುಗಳು ಸುತ್ತಿಕೊಂಡಿರುವ ಫೋಟೋಗಳ ಸರಣಿಯನ್ನು ಪೋಸ್ಟ್ ಮಾಡಿದ್ದಾರೆ. ಹರಿಸಲ್ ಕಾಡಿನ ಮ್ಯಾಜಿಕಲ್ ಮೆಲ್ಘಾಟ್​ನಲ್ಲಿ 3 ನಾಗರಹಾವುಗಳನ್ನು ಗುರುತಿಸಲಾಗಿದೆ ಎಂದು ಸೆಮಾಲ್ಕರ್ ಬರೆದುಕೊಂಡಿದ್ದು, ಈ ಪೋಸ್ಟ್ ಅನ್ನು 4,700ಕ್ಕೂ ಹೆಚ್ಚು ಬಳಕೆದಾರರು ಲೈಕ್​ ಮಾಡಿದ್ದಾರೆ.

ಐಎಫ್​ಎಸ್​ ಅಧಿಕಾರಿ ಸುಸಾಂತ್​ ನಂದಾ ಕೂಡ ಕೋಬ್ರಾ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಫೋಟೋ ಕೃಪೆಯನ್ನು ಸೆಮಾಲ್ಕರ್​ ಅವರಿಗೆ ನೀಡಿದ್ದಾರೆ. ಒಂದೇ ಸಮಯದಲ್ಲಿ ಮೂರು ಕೋಬ್ರಾಗಳು ಆಶೀರ್ವದಿಸಿದಾಗ ಎಂದು ಫೋಟೋಗೆ ಸುಸಾಂತ್​ ಅವರು ಅಡಿಬರಹ ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೋಬ್ರಾಗಳ ಫೋಟೋ ವೈರಲ್​ ಆಗಿದ್ದು, ನೆಟ್ಟಿಗರು ಹುಬ್ಬೇರಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ದೃಶ್ಯ ಜೀವಮಾನದಲ್ಲಿ ಒಮ್ಮೆ ನೋಡಲು ಸಿಗುವಂತಹದ್ದು ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net