

ಚೆನ್ನೈ: ಸೂಪರ್ ಸ್ಟಾರ್ ಸೂರ್ಯ ಅವರ ತಮಿಳು ಚಲನಚಿತ್ರ 'ಜೈಭೀಮ್' ಐಎಂಡಿಬಿ ರಾಂಕಿಂಗ್ನಲ್ಲಿ ಪ್ರಪಥಮ ಸ್ಥಾನ ಗಳಿಸಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ವಿವಾದಕ್ಕೆ ಸಿಲುಕಿದೆ. ಚಿತ್ರದ ಕೆಲವು ಅಂಶಗಳು ಸ್ಥಳೀಯ ವನ್ನಿಯಾರ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎನ್ನಲಾಗಿದ್ದು, ಕೆಲವು ಸಂಘಟನೆಗಳು ಮತ್ತು ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಎಂಕೆಯ ಮಯಿಲಾಡುತುರೈ ಜಿಲ್ಲಾ ಕಾರ್ಯದರ್ಶಿ ಸೀತಾಮಲ್ಲಿ ಪಳನಿಸ್ವಾಮಿ ಅವರು ಸೂರ್ಯ ಅವರ ಮೇಲೆ ಹಲ್ಲೆ ಮಾಡುವವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸೋಮವಾರದಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪಳನಿಸ್ವಾಮಿ ಅವರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153ಎ ಅಡಿ ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಚಿತ್ರದ ನಿರ್ಮಾಪಕರೂ ಆದ ಸೂರ್ಯ, ಶೋಷಿತ ಸಮುದಾಯದ ಪರವಾಗಿ ದನಿಯೆತ್ತುವ ವಕೀಲನ ಪಾತ್ರದಲ್ಲಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಆದರೆ, ಪಳನಿಸ್ವಾಮಿ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಸೂರ್ಯ ಅವರ ಚೆನ್ನೈನ ಟಿ.ನಗರದಲ್ಲಿರುವ ನಿವಾಸಕ್ಕೆ ಸಂಪೂರ್ಣ ಪೊಲೀಸ್ ಭದ್ರತೆ ಒದಗಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)