ಒಂದೇ ದಿನಕ್ಕೆ ಶ್ರೀಮಂತನಾಗಲು ಹೋಗಿ ಪೊಲೀಸರ ಕೈಗೆ ತಗ್ಲಾಕೊಂಡ ಗುಮಾಸ್ತ! ಈತನ ದುಷ್ಕೃತ್ಯಕ್ಕೆ ಪತ್ನಿಯೂ ಸಾಥ್​

Accused Arrest
Published on

ವಿಜಯನಗರ: ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಹೇಳಲಾದ ಪ್ರಕರಣವು ಸ್ಫೋಟಕ ತಿರುವು ಪಡೆದುಕೊಂಡಿದೆ. ಅಸಲಿಗೆ ಈ ಪ್ರಕರಣದಲ್ಲಿ ಸುಲಿಗೆಯೇ ನಡೆದಿಲ್ಲ. ಹಣ ಲಪಾಟಿಸಲು ಗಂಡ-ಹೆಂಡತಿ ಸೇರಿಕೊಂಡು ನಡೆಸಿರುವ ಹೈಡ್ರಾಮ ಎಂಬುದು ಪೊಲೀಸ್​ ತನಿಖೆಯ ವೇಳೆ ಬಟಾಬಯಲಾಗಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿಯ ಮಾರುತಿ ಟ್ರೇಡರ್ಸ್​ನ ಗುಮಾಸ್ತ ಸಂತೋಷ್​ ಕುಮಾರ್​ ಮತ್ತು ಆತನ ಪತ್ನಿ ಲಕ್ಷ್ಮೀಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.

ನಡೆದಿದ್ದೇನೆಂದರೆ, ಕಂಪನಿಯ 6 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್​ಗೆ ಡೆಪಾಸಿಟ್​ ಮಾಡಲೆಂದು ಗುಮಾಸ್ತ ಸಂತೋಷ್​ ತೆಗೆದುಕೊಂಡು ಹೋಗಿದ್ದ. ಮಾರ್ಗ ಮಧ್ಯ ಕಣ್ಣಿಗೆ ಖಾರದಪುಡಿ ಎರಚಿ ಹಣವಿದ್ದ ಬ್ಯಾಗ್​ ಅನ್ನು ಸುಲಿಗೆ ಮಾಡಿದರು ಎಂದು ಸಂತೋಷ್​ ತಮ್ಮ ಮಾಲೀಕರ ಬಳಿ ಹೇಳಿದ್ದ. ಇದಾದ ಬಳಿಕ ಈ ಸಂಬಂಧ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಮಾಲೀಕರು ದೂರು ದಾಖಲಿಸಿದ್ದರು.

ತನಿಖೆ ಆರಂಭಿಸಿದ ಹಗರಿಬೊಮ್ಮನಹಳ್ಳಿ ಠಾಣಾ ಪೊಲೀಸರಿಗೆ ಪ್ರಕರಣ ಅಸಲಿಯತ್ತು ನಂತರದಲ್ಲಿ ಬಯಲಾಯಿತು. ಸಂತೋಷ್​ ಮತ್ತು ಆತನ ಪತ್ನಿ ಲಕ್ಷ್ಮಿ ತಮ್ಮಷ್ಟಕ್ಕೆ ತಾವೇ ಮುಖಕ್ಕೆ ಖಾರದಪುಡಿ ಎರಚಿಕೊಂಡು, ಯಾರೋ ಖದೀಮರು ಸುಲಿಗೆ ಮಾಡಿದರು ಎಂದು ಘಟನೆಯನ್ನು ಸೃಷ್ಟಿಸಿ, ಕಟ್ಟುಕತೆ ಕಟ್ಟಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದೀಗ ಇಬ್ಬರನ್ನು ಬಂಧಿಸಲಾಗಿದ್ದು, 6 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಅಂದಹಾಗೆ ಆರೋಪಿ ಉದ್ದೇಶ ಏನಿತ್ತು ಅಂದರೆ, ಒಂದೇ ದಿನಕ್ಕೆ ಶ್ರೀಮಂತನಾಗಲು ಬಯಸಿದ್ದ. ಆದರೆ, ಅದಕ್ಕಾಗಿ ಆತ ಆಯ್ಕೆ ಮಾಡಿಕೊಂಡ ದಾರಿ ಒಳ್ಳೆಯದಾಗಿರಲಿಲ್ಲ. ಕೊನೆಗೆ ತನ್ನ ಕರ್ಮದಿಂದ ತಾನೇ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ನಡೆದು 24 ಗಂಟೆಯೊಳಗೆ ಹಗರಿಬೊಮ್ಮನ ಹಳ್ಳಿ ಠಾಣಾ ಪೊಲೀಸರು ಪ್ರಕರಣಕ್ಕೆ ಸುಖಾಂತ್ಯವಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net