

ಕಾಬುಲ್: ತಾಲಿಬಾನಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನ ನಿತ್ಯವೂ ನರಕ ಅನುಭವಿಸುತ್ತಿದೆ. ಯಾವುದಕ್ಕೂ ಸ್ವಾಂತಂತ್ರ್ಯ ಇಲ್ಲವೆಂಬಂತಾಗಿದೆ. ಅದಕ್ಕೆ ಉದಾಹರಣೆಯಾಗಿ ಆಫ್ಘಾನ್ ಪಕ್ತಿಯಾ ಪ್ರಾಂತ್ಯದಲ್ಲಿ ಘಟನೆಯೊಂದು ನಡೆದಿದ್ದು, ಸಂಗೀತಗಾರರೊಬ್ಬರ ಸಂಗೀತ ಸಾಧನವನ್ನು ಆತನ ಕಣ್ಣ ಮುಂದೆಯೇ ತಾಲಿಬಾನಿಗಳು ಸುಟ್ಟು ಹಾಕಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಅಬ್ದುಲಖ್ ಒಮೇರಿ ಎಂಬ ಆಫ್ಘಾನ್ನ ಪತ್ರಕರ್ತರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ತಾಲಿಬಾನಿಗಳು ಸಂಗೀತ ಸಾಧನಕ್ಕೆ ಬೆಂಕಿ ಹಚ್ಚಿದ್ದು, ಅದರ ಮುಂದೆಯೇ ನಿಂತಿರುವ ಸಂಗೀತಗಾರ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ, ಆತನನ್ನು ನೋಡಿ ಶಸ್ತ್ರಾಸ್ತ್ರ ಹಿಡಿದಿರುವ ತಾಲಿಬಾನಿಗಳು ನಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
ಈ ಘಟನೆ ಪಕ್ತಿಯಾ ಪ್ರಾಂತ್ಯದ ಜಜೈಅರುಬ್ ಜಿಲ್ಲೆಯಲ್ಲಿ ನಡೆದಿದೆ ಎಂದು ಒಮೇರಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈಗಾಗಲೇ ತಾಲಿಬಾನಿಗಳು ವಾಹನಗಳಲ್ಲಿ ಮ್ಯೂಸಿಕ್ ಬಳಸುವುದನ್ನು ನಿಷೇಧಿಸಿದ್ದಾರೆ. ಅಲ್ಲದೆ, ಮದುವೆ ಮಂಟಪ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲೂ ಮ್ಯೂಸಿಕ್ ಬ್ಯಾನ್ ಮಾಡಲಾಗಿದೆ.
ಇತ್ತೀಚೆಗಷ್ಟೇ ಬಟ್ಟೆ ಅಂಗಡಿಗಳ ಮುಂದೆ ಇಡಲಾಗಿದ್ದ ಹೆಣ್ಣಿನ ಗೊಂಬೆಗಳನ್ನು ತಲೆಯನ್ನು ತೆಗೆಯುವಂತೆ ತಾಲಿಬಾನ್ ಆದೇಶಿಸಿತ್ತು. ಹೆರಾತ್ ಪ್ರಾಂತ್ಯದಲ್ಲಿ ಗೊಂಬೆಗಳ ತಲೆ ತೆಗೆಯುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಷರಿಯಾ ಕಾನೂನಿಗೆ ವಿರುದ್ಧ ಎಂದು ತಾಲಿಬಾನ್ ಸಮರ್ಥಿಸಿಕೊಂಡಿದೆ. ಇನ್ನು ಆಫ್ಘಾನ್ನಲ್ಲಿ ಹೆಣ್ಣು ಮಕ್ಕಳು ಪುರುಷರ ಜತೆಯಿಲ್ಲದೇ ಒಬ್ಬಂಟಿಯಾಗಿ ಓಡಾಡುವಂತಿಲ್ಲ. ಬುರ್ಖಾವನ್ನು ಕಡ್ಡಾಯವಾಗಿ ಧರಿಸಲೇಬೇಕು. ಹೀಗೆ ಸಾಕಷ್ಟು ನಿಯಮಗಳನ್ನು ಷರಿಯಾ ಕಾನೂನಿನ ಅಡಿ ತಾಲಿಬಾನಿಗಳು ಜಾರಿ ಮಾಡಿದ್ದು, ಆಫ್ಘಾನ್ ಅಕ್ಷರಶಃ ಕಟ್ಟುಪಾಡುಗಳಿಂದ ನಲುಗಿ ಹೋಗಿದೆ.
20 ವರ್ಷಗಳ ನಂತರ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವುದರಿಂದ, ಭಯೋತ್ಪಾದಕ ಗುಂಪಿನ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರು ಅನಿಶ್ಚಿತ ಭವಿಷ್ಯವನ್ನು ಎದುರಿಸುವ ಸಾಧ್ಯತೆಯಿದೆ ಎಂದು ತಜ್ಞರು ನಂಬಿದ್ದಾರೆ. (ಏಜೆನ್ಸೀಸ್)