ಮಹಿಳೆಯ ಕಿವಿಯೊಳಗಡೆ ಸೇರಿದ ಹಾವನ್ನು ಹೊರತೆಗೆಯಲು ಹರಸಾಹಸ! ಭಯಾನಕ ವಿಡಿಯೋ ವೈರಲ್​

Snake in Ear
Published on

ನವದೆಹಲಿ: ಮಹಿಳೆಯೊಬ್ಬರ ಕಿವಿಯೊಳಗೆ ಸೇರಿದ ಸಣ್ಣ ಹಾವೊಂದು ಹೊರಬರಲಾರದೇ ಕಿವಿಯಲ್ಲಿ ಸಿಲುಕಿಕೊಂಡಿರುವ ಮತ್ತು ಅದನ್ನು ಹೊರತೆಗೆಯಲು ವೈದ್ಯರೊಬ್ಬರು ಹರಸಾಹಸ ಪಡುತ್ತಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ವೈದ್ಯರೊಬ್ಬರು ತಮ್ಮ ಕೈಗೆ ಗ್ಲೌಸ್​ ಹಾಕಿಕೊಂಡು ರೋಗಿಯ ಕಿವಿಯಿಂದ ಸಣ್ಣ ಹಾವನ್ನು ಹೊರತೆಗೆಯುತ್ತಿದ್ದು, ಹಾವು ಹೊರಗಡೆ ಬರಲಾಗದೇ ಅಲ್ಲಿಯೇ ಸಿಲುಕಿರುವ ದೃಶ್ಯ ವಿಡಿಯೋದಲ್ಲಿದೆ.

ವಿಡಿಯೋದ ಸ್ಥಳ ಮತ್ತು ಸಮಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹಾವನ್ನು ಹೊರ ತೆಗೆಯಲು ವೈದ್ಯರು ತಮಗೆ ಗೊತ್ತಿರುವ ಎಲ್ಲ ಪ್ರಯತ್ನ ಮಾಡಿರುವುದು ವಿಡಿಯೋದಲ್ಲಿ ಗೋಚರವಾಗುತ್ತದೆ. ಆದರೆ, ಹಾವನ್ನು ಹೊರಗೆ ತೆಗೆಯಲಾಯಿತೋ? ಇಲ್ಲವೋ? ಎಂಬ ಮಾಹಿತಿ ವಿಡಿಯೋದ ಕೊನೆಯಲ್ಲಿ ಇಲ್ಲ. ಆದರೂ ಈ ಅನುಮಾನಾಸ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಚಂದನ್​ ಸಿಂಗ್​ ಹೆಸರಿನ ಫೇಸ್​ಬುಕ್​ ಬಳಕೆದಾರ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ, "ಕಿವಿಯೊಳಗೆ ನುಸುಳಿದ ಹಾವು" ಎಂಬ ಅಡಿಬರಹದೊಂದಿಗೆ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಇದುವರೆಗೂ 1.42 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದು, ನೂರಾರು ಮಂದಿ ಕಾಮೆಂಟ್​ ಮಾಡಿದ್ದಾರೆ. ವಿಡಿಯೋ ನೋಡಿ ಭಯಗೊಂಡಿದ್ದಾಗಿ ಅನೇಕ ನೆಟ್ಟಿಗರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಹಾವನ್ನು ಹೇಗೆ ಹೊರಗಡೆ ತೆಗೆಯಲಾಯಿತು ಎಂಬುದನ್ನು ತಿಳಿಸುವ ಸಂಪೂರ್ಣ ವಿಡಿಯೋವನ್ನು ಪೋಸ್ಟ್​ ಮಾಡುವಂತೆ ಕೆಲವರು ಕಾಮೆಂಟ್​ನಲ್ಲಿ ಕೇಳಿಕೊಂಡಿದ್ದಾರೆ. ಇನ್ನು ಕೆಲವರು ಇದು ನಕಲಿ ವಿಡಿಯೋ ಎಂದಿದ್ದಾರೆ. ವ್ಯೂವ್ಸ್​ಗಾಗಿ ತಪ್ಪು ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ ಎಂದು ಜರಿದಿದ್ದಾರೆ.

ಗ್ರಹದ ಮೇಲಿನ ಮಾರಣಾಂತಿಕ ಮತ್ತು ಅತ್ಯಂತ ವಿಷಕಾರಿ ಪ್ರಾಣಿಗಳಲ್ಲಿ ಹಾವು ಕೂಡ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ ಪ್ರತಿ ವರ್ಷ ಹಾವು ಕಡಿದು 81 ರಿಂದ 1,38,000 ಮಂದಿ ಸಾವಿಗೀಡಾಗುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net