ಜ್ಯೋತಿಷಿ ವೇಣು ಸ್ವಾಮಿ ನುಡಿದ ಭಯಾನಕ ಭವಿಷ್ಯಕ್ಕೆ ಹೆದರಿ ವಿಜಯ್​ರಿಂದ ಅಂತರ ಕಾಯ್ದುಕೊಂಡರಾ ರಶ್ಮಿಕಾ?

Rashmika
Published on

ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ದೇವರಕೊಂಡ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಇಡೀ ಚಿತ್ರರಂಗವೇ ಶುಭಾಶಯಗಳ ಮಹಾಪೂರವನ್ನೇ ಹರಿಸಿರುವಾಗ ವಿಜಯ್​ಗೆ ತುಂಬಾ ಆತ್ಮೀಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಒಂದೇ ಒಂದು ಶುಭ ಕೋರದಿರುವುದು ನಾನಾ ಚರ್ಚೆಗೆ ಕಾರಣವಾಗಿದೆ.

ವಿಜಯ್​ ಮತ್ತು ರಶ್ಮಿಕಾ ತುಂಬಾ ಆತ್ಮೀಯರು. ಅಲ್ಲದೆ, ವಿಜಯ್ ಜತೆ ಆಗಾಗ ಹೋಟೆಲ್​ ಹಾಗೂ ಪ್ರವಾಸಿ ತಾಣಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಇದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ರಶ್ಮಿಕಾ ಶುಭಕೋರದಿರುವುದನ್ನು ನೋಡಿದರೆ, ವಿಜಯ್​ರಿಂದಲೂ ಅಂತರ ಕಾಯ್ದುಕೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಖ್ಯಾತ​ರಾಗಿರವ ಜ್ಯೋತಿಷಿ ವೇಣು ಸ್ವಾಮಿ ನುಡಿದ ಭವಿಷ್ಯಕ್ಕೆ ಹೆದರಿ ಅಂತರ ಕಾಯ್ದುಕೊಂಡಿದ್ದಾರಾ ಎಂಬ ಚರ್ಚೆಯು ಉದ್ಧವವಾಗಿದೆ.

ರಶ್ಮಿಕಾ, ಅನೇಕ ಬಾರಿ ವೇಣು ಸ್ವಾಮಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ರಶ್ಮಿಕಾ ಹೈದರಾಬಾದ್​ನಲ್ಲಿ ಮನೆ ಖರೀದಿಸಿದಾಗಲೂ ರಶ್ಮಿಕಾ, ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿದ್ದರು. ಆಗಾಗ ಸಲಹೆಗಳನ್ನು ಪಡೆಯುತ್ತಿದ್ದರು. ಇದರ ನಡುವೆ ಜ್ಯೋತಿಷಿ ಮತ್ತು ರಶ್ಮಿಕಾ ನಡುವೆ ಮನಸ್ತಾಪ ಉಂಟಾಗಿ ವೇಣು ಸ್ವಾಮಿಯಿಂದ ರಶ್ಮಿಕಾ ಅಂತರ ಕಾಯ್ದುಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ವಿರುದ್ಧ ವೇಣು ಸ್ವಾಮಿ ಹರಿಹಾಯುವ ಜತೆಗೆ ಭಯಾನಕ ಭವಿಷ್ಯ ನುಡಿದಿದ್ದರು. ರಶ್ಮಿಕಾ ಅವರು ಸಮಾಜಕ್ಕೆ ಮಾತ್ರ ಸೆಲೆಬ್ರಿಟಿ ಹೊರತು ನನಗಲ್ಲ. ನಾನು ಸಿಎಂ ಸೇರಿದಂತೆ ಯಾವುದೇ ಪ್ರಭಾವಿ ವ್ಯಕ್ತಿಗಳ ಜತೆ ಮಾತನಾಡುವಾಗಲೂ ಗ್ರಹಗತಿಗಳನ್ನು ನೋಡಿ ಮಾತನಾಡುತ್ತೇನೆ ಹೊರತು ನಿಮ್ಮ ಬಳಿಯಿರುವ ಕಾರು, ಸ್ಟೇಟಸ್​ ಹಾಗೂ ನಿಮ್ಮ ಸುತ್ತ ಇರುವ ಗನ್​ ಮ್ಯಾನ್​ ನೋಡಿ ನಾನು ಮಾತನಾಡುವುದಿಲ್ಲ. ನಾನು ಎಲ್ಲ ರೀತಿಯ ವ್ಯಕ್ತಿಗಳನ್ನು ನೋಡಿದ್ದೇನೆ. ಈ ರಾಜ ವೈಭೋಗ ಎಲ್ಲವು ಕ್ಷಣಿಕವಷ್ಟೇ. ನೀವು ಏನೇ ಹಾರಾಡಿದರು ನನ್ನನ್ನು ಏನು ಮಾಡಲು ಆಗುವುದಿಲ್ಲ. ನಾನೇನು ಚಿಂತಿಸುವುದೂ ಇಲ್ಲ ಎಂದು ಹೇಳಿದ್ದರು.

ಲವ್​ ಅಫೇರ್​ ಬಿಟ್ಟುಬಿಡು ಎಂದು ಸಲಹೆ ನೀಡಿದ್ದೆ. ಸಾಕಷ್ಟು ಮಹಿಳೆಯರು ಸರ್ವನಾಶ ಆಗಿರುವುದು ಪ್ರೇಮದಿಂದಲೇ. ನನ್ನ ಬಳಿ ಬರುವ ಅನೇಕರು ಪ್ರೀತಿಯಿಂದ ಮೋಸ ಹೋಗಿರುವವರೇ. ಯುವಕನನ್ನು ನಂಬಿ ತಾನು ದುಡಿದ ಹಣವನ್ನು ನೀಡಿ ಮೋಸ ಹೋಗಿರುವವರೇ ಹೆಚ್ಚು. ರಶ್ಮಿಕಾರದ್ದು ಅದೇ ಟ್ರ್ಯಾಕ್. ಅವರ ಲವ್​ ಅಫೇರ್​ ಮುಂದೆ ಸಮಸ್ಯೆ ಆಗಲಿದೆ. ಇದೇ ಎಚ್ಚರಿಕೆಯನ್ನು ಆಕೆಗೆ ನೀಡಿದೆ. ಆದರೆ, ಇದು ನನ್ನ ವೈಯಕ್ತಿಕ ವಿಚಾರ. ನಿಮ್ಮ ಕೆಲಸ ನೀವು ಮಾಡಿ, ನಮ್ಮ ವೈಯಕ್ತಿಕ ವಿಚಾರದ ಬಗ್ಗೆ ನೀವೇಕೆ ಮಾತನಾಡುತ್ತೀರಾ ಎಂದು ಖಾರವಾಗಿ ಮಾತನಾಡಿದರು. ಅಂದಿನಿಂದ ಇಬ್ಬರು ಅಂತರ ಕಾಯ್ದುಕೊಂಡಿದ್ದೇವೆ ಎಂದು ವೇಣು ಸ್ವಾಮಿ ಹೇಳಿದ್ದರು. ಇದರೊಂದಿಗೆ 2024ರವರೆಗೆ ಅವರ ಭವಿಷ್ಯ ಚೆನ್ನಾಗಿ ಇರುತ್ತದೆ. ಆಮೇಲೆ ಅವರಿಗೆ ಸಂಕಷ್ಟಗಳು ಎದುರಾಗಲಿವೆ ಎಂದು ಇದೇ ಸಂದರ್ದಲ್ಲಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು.

ಇದೀಗ ರಶ್ಮಿಕಾ ಶುಭಕೋರದೇ ಇರುವುದು ಮತ್ತು ಇತ್ತೀಚೆಗೆ ವಿಜಯ್​ ಜತೆ ಎಲ್ಲಿಯೂ ಕಾಣಿಸಿಕೊಳ್ಳದೇ ಇರುವುದನ್ನು ನೋಡಿದರೆ, ವೇಣು ಸ್ವಾಮಿಯ ಭವಿಷ್ಯಕ್ಕೆ ಹೆದರಿದರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ. ವಿಜಯ್ ಮನೆಯಲ್ಲಿ ರಶ್ಮಿಕಾ ಸಂಕ್ರಾತಿ ಹಬ್ಬ ಕೂಡ ಆಚರಿಸಿದ್ದರು. ಅಲ್ಲದೆ, ಹೊಸ ವರ್ಷದಂದು ವಿಜಯ್​ ಕುಟುಂಬದ ಜತೆ ಗೋವಾದಲ್ಲಿ ರಶ್ಮಿಕಾ ವರ್ಷಾಚಾರಣೆ ಮಾಡಿದ್ದರು. ವಿಜಯ್​ಗಾಗಿ ಒಮ್ಮೆ ಅಮೆರಿಕಕ್ಕೂ ರಶ್ಮಿಕಾ ಪ್ರವಾಸ ಮಾಡಿದ್ದರು. ಇಷ್ಟೊಂದು ಆತ್ಮೀಯಳಾಗಿದ್ದ ರಶ್ಮಿಕಾ, ಇದೀಗ ವಿಜಯ್​ ಬರ್ತಡೇಗೆ ಒಂದೇ ಒಂದು ಶುಭ ಕೋರಿಲ್ಲ ಅಂದರೆ ಅಚ್ಚರಿಯಲ್ಲದೇ ಮತ್ತೇನು? ಈ ಕಾರಣದಿಂದಲೇ ರಶ್ಮಿಕಾ ಇದೀಗ ಭಾರೀ ಸುದ್ದಿಯಾಗಿದ್ದಾರೆ. ರಶ್ಮಿಕಾ ವಿಶ್ ಮಾಡದೇ ಇರೋದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ರಶ್ಮಿಕಾ ಮತ್ತು ವಿಜಯ್ ನಡುವೆ ಬಿರುಕು ಮೂಡಿದೆ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟೊಂದು ಆತ್ಮೀಯರಾಗಿದ್ದವರೂ ವಿಶ್ ಮಾಡದೇ ಇರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇಬ್ಬರೂ ರಿಲೇಷನ್​​ಶಿಪ್ ನಲ್ಲಿದ್ದಾರೆ ಅನ್ನೋ ಗಾಸಿಪ್ ಇತ್ತು. ಮದ್ವೆನೂ ಆಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ವು. ಆದರೆ, ಇದೀಗ ರಶ್ಮಿಕಾ ಶುಭಕೋರದೇ ಇರುವುದು ತೀವ್ರ ಕುತೂಹಲ ಮೂಡಿಸಿದ್ದು, ರಶ್ಮಿಕಾ ಏನು ಉತ್ತರ ನೀಡಲಿದ್ದಾರೆ ಎಂಬುದರ ಮೇಲೆ ಎಲ್ಲರ ಗಮನವಿದೆ.

ಪ್ರಖ್ಯಾತ ಸಿನಿಮಾ ಮತ್ತು ರಾಜಕೀಯ ಜ್ಯೋತಿಷಿಯಾಗಿರುವ ವೇಣು ಸ್ವಾಮಿ, ಮೂರು ವರ್ಷಗಳ ಹಿಂದೆಯೇ ಮಾಧ್ಯಮ ಸಂದರ್ಶನದಲ್ಲಿ ಸಮಂತಾ ಮತ್ತು ನಾಗಚೈತನ್ಯ ಮದುವೆಯನ್ನು ಪ್ರಸ್ತಾಪಿಸಿ, ಅವರಿಬ್ಬರ ಜಾತಕದ ಪ್ರಕಾರ ಮದುವೆ ನಂತರ ಮನಸ್ತಾಪ ಉಂಟಾಗಿ ಬೇರೆ ಬೇರೆ ಆಗಲಿದ್ದಾರೆ ಎಂದು ಹೇಳಿದ್ದರು. ಅದರಂತೆಯೇ ಸಮಂತಾ-ನಾಗಚೈತನ್ಯ ಬೇರೆಯಾಗಿದ್ದು, ಇದೀಗ ಟಾಲಿವುಡ್​ನಲ್ಲಿ ವೇಣು ಸ್ವಾಮಿ ಸಖತ್​ ಸದ್ದು ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net