ಹಾಸ್ಟೆಲ್​ ಪಕ್ಕದಲ್ಲೇ ಸ್ಫೋಟ: ಭಯಾನಕ ಅನುಭವ ಬಿಚ್ಚಿಟ್ಟ ಯೂಕ್ರೇನಲ್ಲಿ ಸಿಲುಕಿರುವ ಕಲಬುರಗಿಯ ವಿದ್ಯಾರ್ಥಿಗಳು

KLB Student
Published on

ಕಲಬುರಗಿ: ಯೂಕ್ರೇನ್​ ಮೇಲೆ ರಷ್ಯಾ ದಾಳಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಯೂಕ್ರೇನ್​ನಲ್ಲಿ ಸಂಪೂರ್ಣ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ವಿಮಾನ ಸಂಚಾರ ರದ್ದಾಗಿದ್ದು ರಾಜ್ಯದ ಕೆಲ ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿ ಜೀವ ಭಯದಲ್ಲಿ ಸಮಯ ಕಳೆಯುತ್ತಿದ್ದಾರೆ.

ಯೂಕ್ರೇನ್​ನ ಪ್ರಮುಖ ನಗರಗಳಲ್ಲಿ ಒಂದಾದ ಹಾಗೂ ರಷ್ಯಾ ದಾಳಿ ಮಾಡಿದ ನಗರವಾದ ಕಾರ್ಕಿವ್​ನಲ್ಲಿ ಕಲಬುರಗಿಯ ಮೂವರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಎಂಬಿಬಿಎಸ್​ ವಿದ್ಯಾರ್ಥಿಗಳಾದ ಮಲ್ಲಿನಾಥ್, ಶಶಾಂಕ್ ಹಾಗೂ ಜೀವಿತಾ ಯೂಕ್ರೇನ್​ನಲ್ಲಿ ಜೀವ ಭಯದಲ್ಲಿ ದಿನದೂಡುತ್ತಿದ್ದಾರೆ.

ಇನ್ನು ಮೂವರು ವಿದ್ಯಾರ್ಥಿಗಳು ಇರುವ ಪ್ರದೇಶದ ಕೂಗಳತೆಯ ದೂರದಲ್ಲೇ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದಕ್ಕೆ ಹಾಸ್ಟೆಲ್​ ನಡುಗಿದ ಅನುಭವವಾಗಿದ್ದು, ವಿದ್ಯಾರ್ಥಿಗಳು ಬೆಚ್ಚಿ ಬಿದಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಉಳಿದುಕೊಂಡಿರುವ ಹಾಸ್ಟೆಲ್​ನ ಕಿಟಕಿ, ಗಾಜುಗಳು ಹೊಡೆದಿದ್ದು, ಕೋಣೆಗಳು ಬಿರುಕುಗೊಂಡು ಹಿನ್ನೆಲೆಯಲ್ಲಿ ಅವರನ್ನು ಆಶ್ರಯ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ.

ಇದೀಗ ವಿದ್ಯಾರ್ಥಿಗಳು ಆತಂಕದಲ್ಲೆ ತಮ್ಮ ಗಂಟು-ಮೂಟೆ ಕಟ್ಟಿಕೊಂಡು ಹಾಸ್ಟೆಲ್​ನ ಅಂಡರ್​ಗ್ರೌಂಡ್​ನಲ್ಲಿರುವ ಶೆಲ್ಟರ್ ಹೌಸ್​ಗೆ ಸ್ಥಳಾಂತರವಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net