

ನವದೆಹಲಿ: ಭವಿಷ್ಯದಲ್ಲಿ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಾಡಬಹುದು ಎಂಬ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರು ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿದ್ದಾರೆ.
ನಾನು ಈಶ್ವರಪ್ಪ ಅವರಿಗೆ ಕರೆ ಮಾಡಿದ್ದೆ ಮತ್ತು ಕೇಸರಿ ಧ್ವಜದ ಕುರಿತು ಅವರ ಹೇಳಿಕೆಯನ್ನು ಖಂಡಿಸಿ, ಛೀಮಾರಿ ಹಾಕಿ ಎಚ್ಚರಿಕೆಯನ್ನು ನೀಡಿದ್ದೇನೆಂದು ಜೆ.ಪಿ. ನಡ್ಡಾ ಅವರು ಇಂಡಿಯಾ ಟುಡೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಿಜಾಬ್ ಕುರಿತು ರಾಜ್ಯದಲ್ಲಿ ಎಬ್ಬಿರುವ ವಿವಾದದ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲೂ ಹಾಕಿಕೊಂಡು ಶಾಲೆಗೆ ಆಗಮಿಸಿದ್ದರು. ಅಲ್ಲದೆ, ಕಾಲೇಜೊಂದರ ಮುಂಭಾಗದಲ್ಲಿ ಇದ್ದ ಧ್ವಜಸ್ತಂಬದಲ್ಲಿ ಕೇಸರಿ ಭಾವುಟ ಹಾರಿಸಿದ್ದರು. ಈ ಬಗ್ಗೆ ಮಾತನಾಡುವಾಗ ಭವಿಷ್ಯದಲ್ಲಿ ಕೇಸರಿ ಧ್ವಜ ಕೆಂಪು ಕೋಟೆಯ ಮೇಲೂ ಹಾರಾಡಬಹುದು ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದರು.
ಇದಾದ ಬಳಿಕ ಕಾಂಗ್ರೆಸ್ ನಾಯಕರು ಕೆ.ಎಸ್. ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಶ್ವರಪ್ಪ ಹೇಳಿಕೆ ದೇಶದ್ರೋಹಿ ಹೇಳಿಕೆಯಾಗಿದ್ದು, ಕೂಡಲೇ ಅವರಿಂದ ರಾಜೀನಾಮೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಅಲ್ಲದೆ, ವಿಧಾನಸಭೆ ಕಲಾಪ ವೇಳೆ ಅಹೋರಾತ್ರಿ ಧರಣಿ ಕೂಡ ನಡೆಸಿದೆ. ಆದರೂ, ಈಶ್ವರಪ್ಪ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಇನ್ನು ಹಿಜಾಬ್ ವಿವಾದ ಕುರಿತು ಜೆ.ಪಿ. ನಡ್ಡಾ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹಿಜಾಬ್ ವಿವಾದದ ಕಿಡಿ ಹೊತ್ತಿಸಿದೆ. ಪ್ರತಿಪಕ್ಷಗಳು ಹಿಜಾಬ್ ವಿಷಯವನ್ನು ಸುಡಲು ಪ್ರಯತ್ನಿಸುತ್ತಿವೆ. ನಾವು ಅಭಿವೃದ್ಧಿ ವಿಷಯಗಳ ಮೇಲೆ ಚುನಾವಣೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್)