

ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಹಾಗೂ ಇಲ್ಲಸಲ್ಲದ್ದನ್ನು ಕೇಳಿ ಬೇಸರ ಉಂಟು ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.
ಇದೀಗ ಅದೇ ರೀತಿಯ ಕಾಮೆಂಟ್ಗೆ ಬಾಲಿವುಡ್ ಬೋಲ್ಡ್ ಬ್ಯೂಟಿ ಸ್ವರಾ ಭಾಸ್ಕರ್ ಉತ್ತರ ನೀಡಿದ್ದಾರೆ. ಸ್ವರಾ ಅವರು ತಮ್ಮ ಮುಂಬರುವ "ಜಹಾನ್ ಚರ್ರ್ ಯಾರ್" ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಸ್ವರಾ ಅವರು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ನೆಟ್ಟಿಗನೊರ್ವ ನಿಮ್ಮ ಸಿನಿಮಾಗೆ ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ಉತ್ತರವಾಗಿ ಸ್ವರಾ ಧನ್ಯವಾದಗಳನ್ನು ತಿಳಿಸಿದ್ದರು. ಇದಾದ ಬಳಿಕ ಸ್ವರಾರನ್ನು ಕೆಲ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಬನ್ನಿ ಸ್ವಾಗತ. ನಮ್ಮ ಅಪಾರ್ಟ್ಮೆಂಟ್ನ ನಿರ್ಮಾಣದ ಕೆಲಸ ಸಾಗುತ್ತಿದೆ. ಮಲಗಲು ಸರಿಯಾದ ಜಾಗವಿಲ್ಲ. ನಿಮ್ಮ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ಚೆನ್ನಾಗಿ ನಿದ್ದೆ ಮಾಡಲು ಚಿತ್ರಮಂದಿರಗಿಂತಹ ಒಳ್ಳೆಯ ಸ್ಥಳ ಇನ್ನೆಲ್ಲಿದೆ ಎಂದು ನೆಟ್ಟಿಗನೊಬ್ಬ ಟ್ವೀಟ್ ಮಾಡುವ ಮೂಲಕ ಸ್ವರಾ ಅವರ ಕಾಲೆಳೆದಿದ್ದಾನೆ. ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ಸ್ವರಾ, ಆಹಾ.. ನಿಮ್ಮ ಹೆಚ್ಚು ಅಭ್ಯಾಸ ಮಾಡಿದ ಹಾಸ್ಯವನ್ನು ಪ್ರಸ್ತುತ ಪಡಿಸಲು ನಿಮಗೆ ಅವಕಾಶ ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ನಾನು ಈ ಮಾಡಿದ ಪ್ರತಿಕ್ರಿಯೆಯ ಟ್ವೀಟ್ ಅನ್ನು ನಿಮ್ಮ ಹುಡುಗರಿಗೆ ತೋರಿಸು ಹೋಗು ಎಂದಿದ್ದಾರೆ. ಸದ್ಯ ಸ್ವರಾ ಅವರ ಟ್ವೀಟ್ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ.
ಅಂದಹಾಗೆ ಜಹಾನ್ ಚರ್ರ್ ಯಾರ್ ಸಿನಿಮಾ ಸೆ.16ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಮೆಹರ್ ವಿಜ್, ಪೂಜಾ ಚೋಪ್ರಾ ಮತ್ತು ಶಿಖಾ ತಲ್ಸಾನಿಯಾ ಸಹ ನಟಿಸಿದ್ದಾರೆ. (ಏಜೆನ್ಸೀಸ್)