

ಚೆನ್ನೈ: ತಮಿಳುನಾಡು ಬಿಜೆಪಿ ಐಟಿ ಸೆಲ್ ನನ್ನ ಫೋನ್ ನಂಬರ್ ಸೋರಿಕೆ ಮಾಡಿದ್ದು, ಸಾಕಷ್ಟು ನಿಂದನೆಗಳು, ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಾಲಿವುಡ್ ನಟ ಸಿದ್ಧಾರ್ಥ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ಧಾರ್ಥ್, ಎಲ್ಲ ಕರೆಗಳನ್ನು ಪೊಲೀಸರಿಗೆ ಹಸ್ತಾಂತರ ಮಾಡಿದ್ದೇನೆ. ನನ್ನ ಫೋನ್ ನಂಬರ್ ಅನ್ನು ಬಿಜೆಪಿ ಐಟಿ ಸೆಲ್ ಸೋರಿಕೆ ಮಾಡಿದೆ. ಸುಮಾರು 500ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದ್ದು, ನನ್ನ ಕುಟುಂಬದ ವಿರುದ್ಧ ತುಂಬಾ ಲಘುವಾಗಿ ಮಾತನಾಡಿದ್ದಾನೆ. ಇಷ್ಟೇ ಅಲ್ಲದೆ, ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಸಹ ಬಂದಿವೆ. ಎಲ್ಲವನ್ನು ಪೊಲೀಸರಿಗೆ ನೀಡಿದ್ದೇನೆ. ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಪ್ರಯತ್ನ ಮಾಡುತ್ತೀರಿ ಎಂದು ಬರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸಿದ್ಧಾರ್ಥ್ ಟ್ಯಾಗ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಬೆದರಿಕೆ ಹಾಕಿರುವ ಕೆಲವರ ಸ್ಕ್ರೀನ್ ಶಾಟ್ಗಳನ್ನು ಶೇರ್ ಮಾಡಿಕೊಂಡಿರುವ ಸಿದ್ಧಾರ್ಥ, ತಮಿಳುನಾಡಿನ ಬಿಜೆಪಿ ಸದಸ್ಯರು ನನಗೆ ಕಿರುಕುಳ ನೀಡಲು ಕೆಲ ಕಿಡಿಗೇಡಿಗಳನ್ನು ಛೂ ಬಿಟ್ಟಿದ್ದಾರೆ. ಹೀಗಾಗಿ ನಿನ್ನೆಯಿಂದ ಅನೇಕರು ನನ್ನ ಮೇಲೆ ಜಾಲತಾಣದಲ್ಲಿ ದಾಳಿ ಮಾಡುತ್ತಿದ್ದಾರೆ. ನಾವು ಕೋವಿಡ್ನಿಂದ ಬದುಕಬಹುದು. ಆದರೆ, ಇಂತಹ ಜನರಿಂದ ಬದುಕುತ್ತೇವೆಯೇ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ಸಿದ್ಧಾರ್ಥ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಸೋತು ಹೋಗಿದೆ ಎಂದು ಜರಿದಿದ್ದರು. ಇದರ ಬೆನ್ನಲ್ಲೇ ಸಿದ್ಧಾರ್ಥ್ ವಿರುದ್ಧ ಜಾಲತಾಣದಲ್ಲಿ ವ್ಯಯಕ್ತಿಕವಾಗಿ ದಾಳಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. (ಏಜೆನ್ಸೀಸ್)