4000 ಮಹಿಳೆಯರ ಜತೆ​ ಸೆಕ್ಸ್​, 77ನೇ ವಯಸ್ಸಲ್ಲಿ ಮರು ಮದ್ವೆ: ಸುಂದರಿಯಿಂದಲೇ ಆಗರ್ಭ ಶ್ರೀಮಂತನ ದುರಂತ ಅಂತ್ಯ!

Japan Rich Man
Published on

ಟೊಕಿಯೋ: ಮದುವೆಯಾದ ಒಂದೇ ತಿಂಗಳಲ್ಲಿ 77 ವರ್ಷದ ವೃದ್ಧ ಪತಿಯನ್ನು ಕೊಲೆ ಮಾಡಿರುವ ಸಂಶಯ ಹಿನ್ನೆಲೆಯಲ್ಲಿ 25 ವರ್ಷದ ಮಹಿಳೆಯನ್ನು ಬಂಧಿಸಿರುವ ಘಟನೆ ಜಪಾನ್​ನಲ್ಲಿ ನಡೆದಿದೆ. ತನ್ನನ್ನು ತಾನು "ಡಾನ್​ ಜಾನ್​" (ಒಬ್ಬ ಮಹಾನ್ ಪ್ರೇಮಿ ಅಥವಾ ಮಹಿಳೆಯರ ಮೋಹಕ) ಎಂದು ಸ್ವಯಂ ಘೋಷಿಸಿಕೊಂಡ ಶ್ರೀಮಂತ ವ್ಯಕ್ತಿಯ ದುರಂತ ಸಾವಿನ ಪ್ರಕರಣವಿದು.

ಕೊಸುಕೆ ನಝಾಕಿ (77) ಕೊಲೆಯಾದ ವ್ಯಕ್ತಿ. ಸುಂದರ ಮಹಿಳೆಯರ ಜತೆ ಸೆಕ್ಸ್​ ಮಾಡುವ ತನ್ನ ಅಗಾಧ ಲೈಂಗಿಕ ಬಯಕೆಗಾಗಿ ತನ್ನ ಜೀವನದಲ್ಲಿ ಸಂಪಾದಿಸಿದ ಮಿಲಿಯನ್​ಗಟ್ಟಲೆ ಹಣವನ್ನು ವ್ಯಯಿಸಿದ್ದ. 2018ರಲ್ಲಿ 77ನೇ ವಯಸ್ಸಿನಲ್ಲಿ ತನ್ನ ಯುವ ಪತ್ನಿಯಿಂದಲೇ ಕೊಸುಕೆ ನಝಾಕಿ ಹತ್ಯೆಯಾಗಿದ್ದಾನೆ ಎನ್ನಲಾಗಿದೆ.

ನಝಾಕಿಯ ವಿಧವ ಪತ್ನಿ ಸಕಿ ಸುಡೋ (25) ಅನಿರ್ದಿಷ್ಟ ಉತ್ತೇಜಕ ಅಥವಾ ಡ್ರಗ್ಸ್​ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಕೊಲೆ ಮಾಡಿದ್ದಾಳೆ ಸಂಶಯ ವ್ಯಕ್ತವಾಗಿದೆ. ನಝಾಕಿ ಅವರ ದೇಹದಲ್ಲಿ ಯಾವುದೇ ಚುಚ್ಚಿದ ಗುರತು ಇರದಿರುವುದರಿಂದ ಕೆಲವು ವರದಿಗಳ ಪ್ರಕಾರ ಡ್ರಗ್ಸ್​ ಅನ್ನು ಕೂಲ್​ ಡ್ರಿಂಕ್ಸ್​ ಒಳಗೆ ಬೆರೆಸಿ ಕೊಡಲಾಗಿದೆ ಎಂದು ಹೇಳಲಾಗಿದೆ. ಪತಿಯ ಸಾವಿಗೂ ಮುನ್ನ ಆರೋಪಿ ಸುಡೋ ಆನ್​ಲೈನ್​ನಲ್ಲಿ ಡ್ರಗ್ಸ್​ ಬಗ್ಗೆ ಹುಡುಕಾಟ ನಡೆಸಿರುವುದು ಸಹ ಬಹಿರಂಗವಾಗಿದೆ.

ನಝಾಕಿ ತಾನು ವಾಸವಿದ್ದ ಜಪಾನ್​ನ ವಾಕಯಾಮಾ ಪ್ರಾಂತ್ಯದ ತನಾಬೆಗೆ 1.3 ಬಿಲಿಯನ್​ ಯೆನ್​ (ಜಪಾನ್​ ಕರೆನ್ಸಿ) ದಾನವಾಗಿ ನೀಡಲು ಆಸ್ತಿ ಪತ್ರದಲ್ಲಿ ಉಲ್ಲೇಖಿಸಿದ್ದ. ಆದರೆ ಅವನ ರಿಯಲ್​ ಎಸ್ಟೇಟ್​ನ​ ಅರ್ಧದಷ್ಟು ಭಾಗ ನಾಗರಿಕ ಕಾನೂನಿನಡಿಯಲ್ಲಿ ತನ್ನ ವಿಧವೆಗೆ ಹೋಗುವುದರಿಂದ, ನಗರವು ಸುಡೋ ಅವರೊಂದಿಗೆ ಹಣವನ್ನು ವಿಭಜಿಸುವ ಬಗ್ಗೆ ಮಾತುಕತೆ ನಡೆಸಿದೆ ಎಂದು ಜಪಾನ್​ ಮಾಧ್ಯಮ ಸಾಂಕಿ ಶಿಂಬುನ್ ವರದಿ ಮಾಡಿದೆ.

ನಝಾಕಿ ಸಾವಿಗೂ ಎಂಟು ತಿಂಗಳ ಮೊದಲು ಬರೆದಿದ್ದ ಅಂಕಣವೊಂದರಲ್ಲಿ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಅಂತರದ ಹೊರತಾಗಿಯೂ, ಆರೋಪಿ ಸೋಡು ಹಣಕ್ಕಾಗಿ ಮಾತ್ರ ನಝಾಕಿ ಅವರನ್ನು ಬಯಸಿದ್ದಾರೆ ಎಂಬ ವರದಿಯನ್ನು ನಝಾಕಿ ತಳ್ಳಿಹಾಕಿದ್ದರು. ಆದರೆ, ಅವರ ಅಂತ್ಯ ಇಂದು ಉತ್ತರ ನೀಡಿದೆ.

ಅಂದಹಾಗೆ ನಝಾಕಿ ರಿಯಲ್​ ಎಸ್ಟೇಟ್​ ಉದ್ಯಮ, ಮದ್ಯ ಮಾರಾಟ ಕಂಪನಿ ನಡೆಸುತ್ತಿದ್ದನು. ಅಲ್ಲದೆ, ಹಣ ಸಾಲ ನೀಡುವ ಕಂಪನಿ ಸಹ ಹೊಂದಿದ್ದನು. ಅತಿ ಹೆಚ್ಚು ಮಾರಾಟವಾದ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವಂತೆ ಸುಮಾರು 4000 ಮಹಿಳೆಯರಿಗಾಗಿ 3 ಬಿಲಿಯನ್​ ಯೆನ್​ (27.5 ಮಿಲಿಯನ್​ ಯುಎಸ್​ ಡಾಲರ್​) ಖರ್ಚ ಮಾಡಿದ್ದನಂತೆ. ಭಾರತೀಯ ಕರೆನ್ಸಿ ಪ್ರಕಾರ 2,03,79,56,250 ರೂಪಾಯಿ.

ನಾನು ಹಣ ಸಂಪಾದನೆ ಮಾಡುವ ಉದ್ದೇಶವೇ ಸುಂದರವಾದ ಮಹಿಳೆಯರೊಂದಿಗೆ ಡೇಟ್​ ಮಾಡಲು ಎಂದು 2016ರ ತನ್ನ ಆತ್ಮಚರಿತ್ರೆ ಡಾನ್​ ಜಾನ್​ ಆಫ್​ ಕಿಶುನಲ್ಲಿ ನಝಾಕಿ ಬರೆದುಕೊಂಡಿದ್ದಾನೆ. ನನಗೆ ಕಾರುಗಳು ಮತ್ತು ಮನೆಗಳ ಮೇಲೆ ಆಸಕ್ತಿ ಇಲ್ಲ. ನನಗೆ ಸುಂದರವಾದ ಮಹಿಳೆಯರೊಂದಿಗೆ ಅಗಾಧವಾದ ಲೈಂಗಿಕ ಬಯಕೆ ಇದೆ ಎಂದು ಬರೆದುಕೊಂಡಿದ್ದ. ಅಲ್ಲದೆ, ಕಾಲೇಜು ವಿದ್ಯಾರ್ಥಿಗಳು ಮತ್ತು ತನ್ನ ಸಿಬ್ಬಂದಿಯನ್ನು ಯಾವ ರೀತಿ ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಎಂಬುದನ್ನು ಸಹ ನಝಾಕಿ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾನೆ.

ನೊಜಾಕಿ, ಸಾವಿಗೆ ಒಂದು ತಿಂಗಳಿಗೂ ಮೊದಲು ಗೆಂಡೈ ಬಿಸಿನೆಸ್ ವೆಬ್‌ಸೈಟ್‌ಗಾಗಿ 2018ರಲ್ಲಿ ಬರೆದ ಒಂದು ಅಂಕಣದಲ್ಲಿ 25ರ ಸುಡೋ ಅವರನ್ನು ಮದುವೆಯಾಗುವುದರ ಮೂಲಕ ಸಂತೋಷವಾಗಿರುತ್ತೇನೆ ಎಂದು ಹೇಳಿಕೊಂಡಿದ್ದರು. ಜನರು ನಝಾಕಿ ಅವರನ್ನು ಎಚ್ಚರಿಸಿದ್ದರೂ ಸಹ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

ನಝಾಕಿ, ಸುಡೋ ಅವರನ್ನು ಟೊಕಿಯೋ ವಿಮಾನ ನಿಲ್ದಾಣದಲ್ಲಿ ಭೇಟಿಯಾದರಂತೆ. ಹೀಗೆ ಪರಿಚಯವಾದ ಇಬ್ಬರು ಕೊನೆಗೆ ಮದುವೆಯನ್ನು ಮಾಡಿಕೊಂಡರು. ಆದರೆ, ಮದುವೆ ಆದ ಒಂದೇ ತಿಂಗಳಿಗೆ ನಝಾಕಿ ದುರಂತ ಸಾವಿಗೀಡಾಗಿದ್ದು, ಡ್ರಗ್ಸ್​ ನೀಡಿ ಕೊಲೆ ಮಾಡಿರುವ ಸಂಶಯದ ಮೇಲೆ ಆತನ ಪತ್ನಿ ಸುಡೋಳನ್ನು ಇದೀಗ ಜಪಾನ್​ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net