

ತಿರುವನಂತಪುರಂ: ಪೊಲೀಸರು ಅಂದರೆ ಜನರು ಮೂಗು ಮುರಿಯುವುದೇಕೆ ಎಂಬ ಪ್ರಶ್ನೆಗೆ ಕೇರಳದ ಸಬ್ ಇನ್ಸ್ಪೆಕ್ಟರ್ ಒಬ್ಬರು ಪ್ರಾಯೋಗಿಕವಾಗಿಯೇ ಉತ್ತರ ನೀಡಿದ್ದಾರೆ. ಹೌದು, ಇಂಥವರಿಂದಲೇ ಪೊಲೀಸ್ ಇಲಾಖೆಗೆ ಅಪಕೀರ್ತಿ ಎಂಬುದಕ್ಕೆ ಅವರೇ ಉದಾಹರಣೆ ಆಗಿದ್ದಾರೆ.
ಸಾವಿನಲ್ಲೂ ರಾಜಕೀಯ ಮಾಡುವುದನ್ನು ನೋಡಿದ್ದೇವೆ. ಆದರೆ, ಈ ಎಸ್ಐ ಸತ್ತು ಹೋದ ವ್ಯಕ್ತಿಯ ಬಳಿಯು ತನ್ನ ನೀಚ ಬುದ್ಧಿ ತೋರಿರುವುದು ಅತ್ಯಂತ ಅಮಾನವೀಯ. ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಳ್ಳತನ ಮಾಡುವ ಮೂಲಕ ಕೊಲ್ಲಂನ ಚಥನ್ನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜ್ಯೋತಿ ಸುಧಾಕರ್ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ವಿವರಣೆಗೆ ಬರುವುದಾದರೆ, ಕಳೆದ ಜೂನ್ 18ರಂದು ಪೆರುಮಥುರಾ ಮೂಲದ ವ್ಯಕ್ತಿಯೊಬ್ಬ ಕನಿಯಾಪುರಂ ರೈಲ್ವೆ ನಿಲ್ದಾಣದ ಬಳಿ ಮೃತಪಟ್ಟಿದ್ದ. ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿದ ಎಸ್ಐ ಜ್ಯೋತಿ ಸುಧಾಕರ್ ಎಲ್ಲ ಪ್ರಕ್ರಿಯೆಯನ್ನು ಮುಗಿಸಿದ್ದರು. ಈ ಪ್ರಕ್ರಿಯೆ ವೇಳೆ ಎಸ್ಐ ಮೊಬೈಲ್ ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ.
ಕೆಲ ದಿನಗಳ ಬಳಿಕ ಮೃತ ವ್ಯಕ್ತಿಯ ಸಂಬಂಧಿಯೊರ್ವ ಬಂದು ಮೃತ ವ್ಯಕ್ತಿಯ ಮೊಬೈಲ್ ನಾಪತ್ತೆ ಆಗಿರುವುದಾಗಿ ಮತ್ತು ಸಾವಿನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಬಳಿಕ ಸೈಬರ್ ಸೆಲ್ ನಡೆಸಿದ ವಿಚಾರಣೆಯಲ್ಲಿ ಮೊಬೈಲ್ ಫೋನ್ ಅನ್ನು ಜ್ಯೋತಿ ಸುಧಾಕರ್ ವಶಕ್ಕೆ ಪಡೆದುಕೊಂಡರು ಎಂಬುದು ತಿಳಿದಿದೆ. ಆ ಸಮಯದಲ್ಲಿ ಜ್ಯೋತಿ ಸುಧಾಕರ್ರನ್ನು ಮಂಗಳಪುರಂ ಠಾಣೆಯಿಂದ ಚಥನ್ನೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಎಸ್ಐ ಸುಧಾಕರ್ ಕಳುವಾಗಿದ್ದ ಮೊಬೈಲ್ನಲ್ಲಿ ತನ್ನ ಅಧಿಕೃತ ಸಿಮ್ ಕಾರ್ಡ್ ಬಳಸುತ್ತಿದ್ದ. ಇದು ಅಧಿಕಾರಿಗಳ ಗಮನಕ್ಕೆ ಬಂದ ಬೆನ್ನಲ್ಲೇ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು ಎಸ್ಐನನ್ನು ಅಮಾನತು ಮಾಡಲಾಗಿದೆ. (ಏಜೆನ್ಸೀಸ್)