

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರ ಜನರು ಆತಂಕಕ್ಕೆ ಒಳಗಾಗಿದ್ದರೆ. ಮುಂಜಾನೆ ಸಮಯವೇ ಭಾರಿ ಶಬ್ದದೊಂದಿಗೆ ಭೂಕಂಪನವಾಗಿದ್ದು, ಸವಿ ನಿದ್ದೆಯಲ್ಲಿದ್ದ ಜನರು ಆಘಾತಕ್ಕೊಳಗಾಗಿದ್ದಾರೆ.
ಇಂದು ಮುಂಜಾನೆ 3.50 4 ಗಂಟೆಯವರೆಗೂ ಎರಡಕ್ಕೂ ಹೆಚ್ಚು ಬಾರಿ ಭೂಮಿ ಕಂಪಿಸಿರುವುದಾಗಿ ಜನರು ಮಾಹಿತಿ ನೀಡಿದ್ದಾರೆ. ಭಾರೀ ಶಬ್ದದೊಂದಿಗೆ ಭೂಕಂಪನವಾಗಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳು ಅಲುಗಾಡಿರುವುದಾಗಿ ತಿಳಿದುಬಂದಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪನ ದಾಖಲಾಗಿದೆ.
ಸ್ಥಳೀಯರ ಪ್ರಕಾರ ಮೊದಲಿಗೆ ಭೂಮಿ ಕಂಪಿಸಿದೆ. ಇದಾದ ಹತ್ತು ನಿಮಿಷದ ಬಳಿಕ ಭಾರಿ ಶಬ್ದ ಕೇಳಿಸಿದೆ. ಆದರೆ, ಎರಡನೇ ಬಾರಿ ಭೂಮಿ ಕಂಪಿಸಲಿಲ್ಲ. ಕೇವಲ ಶಬ್ದ ಮಾತ್ರ ಕೇಳಿದೆವು ಎಂದು ಜನರು ತಿಳಿಸಿದ್ದಾರೆ.
ಆ್ಯಂಡ್ರಾಯ್ಡ್ ಅರ್ಥ್ಕ್ವೇಕ್ ಅಲರ್ಟ್ಸ್ ಸಿಸ್ಟಮ್ ಆ್ಯಪ್ ಮಾಹಿತಿ ಪ್ರಕಾರ ಬೆಳಗ್ಗೆ 3.55ಕ್ಕೆ ಸರಿಯಾಗಿ ಭೂಮಿ ಕಂಪಿಸಿರುವುದಾಗಿ ತಿಳಿದುಬಂದಿದೆ. ಶಿರಾಳಕೊಪ್ಪದ 3 ಕಿ.ಮೀ ವ್ಯಾಪ್ತಿಯಲ್ಲಿ ಭೂಂಕಪನ ಸಂಭವಿಸಿದೆ. ಆದರೆ, ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಅಧಿಕಾರಿಗಳು ಏನು ಹೇಳುತ್ತಾರೆ ಎಂಬುದರ ಬಗ್ಗೆ ಕುತೂಹಲವಿದೆ. ಆದರೆ, ಜನರು ಮಾತ್ರ ಎರಡು ಬಾರಿ ಭೂಕಂಪನದ ಅನುಭವದಿಂದಾಗಿ ಬೆಚ್ಚಿಬಿದ್ದಿದ್ದಾರೆ.