

ಚೆನ್ನೈ: ಮಹಿಳೆಯರೊಂದಿಗೆ ಪಬ್ಜಿ ಆಡುತ್ತಾ ಅವರೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ಆಡಿಯೋವನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿ ಭಾರೀ ಲಾಭ ಮಾಡುತ್ತಿದ್ದ ಪಬ್ಜಿ ಮದನ್ ಕರಾಳ ಮುಖ ಕಳಚಿಬಿದ್ದಿದೆ. ನಿಷೇಧಿತ ಪಬ್ಜಿ ಆಡುವುದಲ್ಲದೆ, ಅಶ್ಲೀಲತೆಯನ್ನು ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಪಬ್ಜಿ ಮದನ್ ದಂಪತಿಯನ್ನು ಚೆನ್ನೈ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಪೋರ್ನೋಗ್ರಫಿಕ್ ಆಡಿಯೋ ಮೂಲಕವೇ ಪಬ್ಜಿ ಮದನ್ ಕೇವಲ ಮೂರು ವರ್ಷದಲ್ಲಿ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿರುವ ಸುದ್ದಿ ಕೇಳಿ ಒಂದು ಕ್ಷಣ ಪೊಲೀಸರಿಗೆ ಶಾಕ್ ಆಗಿದೆ. ಅಲ್ಲದೆ, ಮದನ್ ಮತ್ತು ಪತ್ನಿ ಕೃತಿಕಾ ಬ್ಯಾಂಕ್ ಖಾತೆಯಲ್ಲಿದ್ದ 4 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆತನ ಬಳಿಕ ಮೂರು ಐಷಾರಾಮಿ ಕಾರುಗಳಿರುವುದು ತಿಳಿದುಬಂದಿದೆ.
ಸಾಕಷ್ಟು ಆಸ್ತಿ ಬೆಳಕಿಗೆ ಬಂದ ಕೂಡಲೇ ಪಬ್ಜಿ ಮದನ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ನಡೆಯುತ್ತಿದೆ. ಅಲ್ಲದೆ, ಮದನ್ ಜತೆ ಸಂತ್ರಸ್ತ ಮಹಿಳೆಯೊಬ್ಬಳು ನಡೆಸಿರುವ ಅಶ್ಲೀಲ ಸಂಭಾಷಣೆಯನ್ನು ಯೂಟ್ಯೂಬ್ನಲ್ಲಿ ಸೋರಿಕೆ ಮಾಡಿದ್ದಕ್ಕೆ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.
ಅಂದಹಾಗೆ ಮದನ್, ಚೆನ್ನೈನ ವೆಂಗೌವಾಸಲ್ ಮೂಲದವನು. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾನೆ. ಪಬ್ಜಿ ಆಡುವಾಗಲೇ ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತನಾಡಿ ಅದನ್ನು ರೆಕಾರ್ಡ್ ಮಾಡಿ ಯೂಟ್ಯೂಬ್ನಲ್ಲಿ ಮದನ್ ಹರಿಬಿಡುತ್ತಿದ್ದ. ಲಕ್ಷಾಂತರ ಮಂದಿ ಆತನ ಚಾನೆಲ್ಗೆ ಚಂದಾದಾರರಾಗಿರುವುದರಿಂದ ಮದನ್ ಆದಾಯ ದುಪ್ಪಟ್ಟಾಗಿತ್ತು. ಪೊಲೀಸರ ಪ್ರಕಾರ ಆತ 75 ಕೋಟಿ ರೂಪಾಯಿ ಸಂಪಾದಿಸಿದ್ದಾನೆ. ತನ್ನ ಪತ್ನಿಯ ಸಹಾಯದಿಂದ ಸುಮಾರು 12ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್ಗಳನ್ನು ಮದನ್ ನಡೆಸುತ್ತಿದ್ದಾನೆ.
ಅಚ್ಚರಿಯ ವಿಷಯವೆಂದರೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿದ್ದರೂ ಸಹ ಕೃತಿಕಾ, ಮದನ್ಗೆ ತುಂಬಾ ಸಾಥ್ ನೀಡುತ್ತಿದ್ದಳು. ಮದನ್ಗೆ ಸಾಥ್ ನೀಡುತ್ತಿದ್ದ ಫ್ರೆಂಡ್ಸ್ಗಳ ಬಗ್ಗೆಯೂ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ತನ್ನ ಜತೆ ಬಹಳ ಸೆಕ್ಸಿಯಾಗಿ ಮಾತನಾಡುವ ಮಹಿಳೆಯರಿಗೆ 5 ಲಕ್ಷ ರೂ.ವರೆಗೂ ಹಣ ನೀಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮದನ್ ಜತೆ ಅಶ್ಲೀಲವಾಗಿ ಮಾತನಾಡಿರುವ ಮಹಿಳೆಯರನ್ನು ಸಹ ಪಟ್ಟಿ ಮಾಡಲಾಗುತ್ತಿದೆ. ಇನ್ನು ಮದನ್ನನ್ನು ಹಿಂಬಾಲಿಸುತ್ತಿರುವ ಬಹುತೇಕ ಚಂದಾದಾರಲ್ಲಿ ಅಪ್ರಾಪ್ತರೇ ಹೆಚ್ಚಾಗಿದ್ದಾರೆ. ಮದನ್ನನ್ನು ಜೈಲಿಗೆ ಕಳುಹಿಸಲು ಸಕಲ ಪ್ರಯತ್ನಗಳು ನಡೆಯುತ್ತಿದ್ದು, ಇದರ ನಡುವೆ ಮದನ್ ನಿರೀಕ್ಷಣಾ ಜಾಮೀನಿಗೆ ಗುರುವಾರ ಅರ್ಜಿಯನ್ನು ಸಲ್ಲಿಸಿದ್ದಾನೆ. (ಏಜೆನ್ಸೀಸ್)