ನಟಿ ರಶ್ಮಿಕಾ ಮಂದಣ್ಣ ಹುಡುಕಿಕೊಂಡು ತೆಲಂಗಾಣದಿಂದ ವಿರಾಜಪೇಟೆಗೆ ಬಂದ ಯುವಕನಿಗೆ ಕಾದಿತ್ತು ಶಾಕ್​!

Rashmika Fan
Published on

ಕೊಡಗು: ನಟ-ನಟಿಯರನ್ನು ತುಂಬಾ ಆರಾಧಿಸುವ ಅಭಿಮಾನಿಗಳು ಅವರಿಗಾಗಿ ಎಂತಹ ದುಸ್ಸಾಹಸಕ್ಕೂ ಇಳಿಯುತ್ತಾರೆ. ಅಭಿಮಾನದಿಂದ ಸಾಯುವರು ಇದ್ದಾರೆ ಮತ್ತು ಅವರ ಜತೆ ಒಂದೇ ಒಂದು ಫೋಟೋಗಾಗಿ ಮನೆ ಮುಂದೆ ದಿನವಿಡಿ ಕಾಯುವರು ಇದ್ದಾರೆ. ಚಿತ್ರಮಂದಿರದಲ್ಲಿ ಕಟೌಟ್​ ಹಾರ ಹಾಕಲು ಹೋಗಿ ಕೆಳಗೆ ಬಿದ್ದು ಮೃತಪಟ್ಟ ಉದಾಹರಣೆಗಳು ಇವೆ.

ತಾಜಾ ಘಟನೆ ಏನೆಂದರೆ, ಅಭಿಮಾನಿಯೊಬ್ಬ ನಟಿ ರಶ್ಮಿಕಾ ಮಂದಣ್ಣರನ್ನು ಹುಡುಕಿಕೊಂಡು ತೆಲಂಗಾಣದಿಂದ ವಿರಾಜಪೇಟೆಗೆ ಬಂದಿದ್ದಾನೆ. ಇತ್ತ ರಶ್ಮಿಕಾ ಅವರ ಮನೆಯ ವಿಳಾಸ ತಿಳಿಯದೇ ಇಡೀ ರಾತ್ರಿ ಮನೆಗಾಗಿ ಹುಡುಕಾಡಿದ್ದಾನೆ.

ವಿರಾಜಪೇಟೆಯ ಮಗ್ಗುಲ ಗ್ರಾಮಕ್ಕೆ ತೆರಳಿದ ಯುವಕ ರಶ್ಮಿಕಾ ಮನೆ ಎಲ್ಲಿ ಎಂದು ಸ್ಥಳೀಯರನ್ನು ವಿಚಾರಿಸಿದ್ದಾನೆ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಆತನನ್ನು ಕರೆದೊಯ್ದು ವಿಚಾರಿಸಿದಾಗ ಆತ ತೆಲಂಗಾಣದಿಂದ ಬಂದಿರುವುದು ಗೊತ್ತಾಗಿದೆ.

ಯುವಕನ ಹೆಸರು ಆಕಾಶ್ ತ್ರಿಪಾಠಿ. ತೆಲಂಗಾಣ ಮೂಲದ ಆತ ರಶ್ಮಿಕಾ ಮೇಲಿನ ಅಭಿಮಾನದಿಂದ ಆಕೆಯನ್ನು ಹುಡುಕಿಕೊಂಡು ಬಂದಿದ್ದಾಗಿ ಹೇಳಿದ್ದಾನೆ. ಆದರೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆತನಿಗೆ ಎಚ್ಚರಿಕೆ ನೀಡಿ ವಿರಾಜಪೇಟೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net