ಡಿಯರ್​ ಕಾಮ್ರೇಡ್​ ಚಿತ್ರದಲ್ಲಿ ವಿಜಯ್​ ಜೊತೆ ಲಿಪ್​ಲಾಕ್​: ನೋವಿನ ಸಂಗತಿ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

Dear Comrade
Published on

ಮುಂಬೈ: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣಾ ಅವರು ಪ್ರಸ್ತುತ ತಮ್ಮ ಮೊದಲ ಹಿಂದಿ ಸಿನಿಮಾ "ಗುಡ್​ಬೈ" ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಮೊದಲ ಹಿಂದಿ ಸಿನಿಮಾದಲ್ಲೇ ರಶ್ಮಿಕಾ, ಬಾಲಿವುಡ್​ ದಿಗ್ಗಜ ನಟ ಅಮಿತಾಭ್​ ಬಚ್ಚನ್​ ಜೊತೆ ನಟಿಸಿದ್ದಾರೆ. ಗುಡ್​ಬೈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರದ ಭಾಗವಾಗಿ ಅನೇಕ ಟಿವಿ ಸಂದರ್ಶನಗಳಲ್ಲಿ ರಶ್ಮಿಕಾ ಭಾಗಿಯಾಗುತ್ತಿದ್ದಾರೆ. ಇದರ ನಡುವೆ ಸಂದರ್ಶನವೊಂದರಲ್ಲಿ ಚರಿಷ್ಮಾ ಸುಂದರಿ, "ಡಿಯರ್​ ಕಾಮ್ರೇಡ್" ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಲಿಪ್​ಲಾಕ್​ ದೃಶ್ಯವನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ​​

ಅಂದಹಾಗೆ ಡಿಯರ್​ ಕಾಮ್ರೆಡ್​, ಗೀತಾ ಗೋವಿಂದಂ ಬಳಿಕ ವಿಜಯ್​ ದೇವರಕೊಂಡ ಜೊತೆ ನಟಿಸಿದ ಎರಡನೇ ಸಿನಿಮಾ. ಈ ಸಿನಿಮಾದಲ್ಲಿ ವಿಜಯ್​ ಜೊತೆ ಲಿಪ್​ಲಾಕ್​ ದೃಶ್ಯದಲ್ಲಿ ಕಾಣಿಸಿಕೊಂಡ ಬಳಿಕ ರಶ್ಮಿಕಾ ತುಂಬಾ ಟ್ರೋಲ್​ಗೆ ಗುರಿಯಾಗಿದ್ದರಂತೆ. ಆ ಕ್ಷಣದಲ್ಲಿ ಅವರು ಅನುಭವಿಸಿದ ಮಾನಸಿಕ ವ್ಯಥೆಯ ಬಗ್ಗೆ ಮಾತನಾಡಿರುವ ರಶ್ಮಿಕಾ, ನಾನು ತುಂಬಾ ಭಾವುಕ ವ್ಯಕ್ತಿ ಮತ್ತು ಜನರೊಂದಿಗೆ ನಾನು ಬೆರೆಯುತ್ತೇನೆ. ಡಿಯರ್​ ಕಾಮ್ರೆಡ್​ ಸಿನಿಮಾದಲ್ಲಿ ಲಿಪ್​ಲಾಕ್​ ದೃಶ್ಯ ಸಂಭವಿಸಿತು ಮತ್ತು ಸಹಜವಾಗಿ ಎಲ್ಲರೂ ನನಗೆ ಕರೆ ಮಾಡಿ ಚೆನ್ನಾಗಿ ನಟಿಸಿದ್ದೀಯ ಎಂದು ಹೇಳಿದರು. ಆದರೂ ಅನೇಕ ಕಹಿ ಘಟನೆಗಳು ಕೂಡ ನಡೆದವು. ಅನೇಕರು ಸಾರ್ವಜನಿಕವಾಗಿ ಟ್ರೋಲ್​ ಮಾಡಿದರು. ತನ್ನ ವಿರುದ್ಧ ಕೇಳಿಬಂದ ಟೀಕೆಗಳನ್ನು ನೋಡಿ ಕಣ್ಣು ಮುಚ್ಚಿ ಕೂರಲು ಆಗಲಿಲ್ಲ. ಆದರೂ ಅದೆಲ್ಲವನ್ನು ದಾಟಿ ಹೇಗೆ ಬಂದೆ ಎಂಬುದೇ ನನಗೆ ತಿಳಿದಿಲ್ಲ ಎಂದು ರಶ್ಮಿಕಾ ಹಿಂದಿನ ಕ್ಷಣಗಳನ್ನು ಮೆಲುಕು ಹಾಕಿದರು.

ಮುಂದುವರಿದು ಮಾತನಾಡಿದ ರಶ್ಮಿಕಾ, ಆ ಕ್ಷಣದಲ್ಲಿ ಅನೇಕ ನೋವಿನ ಕ್ಷಣಗಳು ನಡೆಯುತ್ತಿದ್ದವು ಮತ್ತು ನೋವಿನ ಸಂಗತಿಗಳನ್ನು ನಾನು ಪ್ರತಿ ನಿತ್ಯ ಓದುತ್ತಿದ್ದೆ. ನಾನು ಏಕಾಂಗಿ ಭಾವನೆ ಮತ್ತು ನನ್ನ ವಿರುದ್ಧ ಎಲ್ಲರೂ ನಿಂತಿದ್ದಾರೆ ಎಂಬ ಕನಸುಗಳನ್ನು ಹೊಂದಿದ್ದೆ. ಅದು ನಿರಂತರ ಕನಸುಗಳಾಗಿತ್ತು. ಅದು (ಕನಸು) ಏನೆಂದು ಮತ್ತು ಅದು ಹೇಗೆ ಎಂದು ನನಗೆ ತಿಳಿಯಲಿಲ್ಲ. ನಾನು ಅಂತಹ ಕನಸುಗಳೊಂದಿಗೆ ನನ್ನಷ್ಟಕ್ಕೆ ನಾನು ಎಚ್ಚರಗೊಳ್ಳುತ್ತಿದ್ದೆ ಮತ್ತು ಎಚ್ಚರಗೊಂಡಾಗಲೆಲ್ಲ ಬೆಡ್​ ಮೇಲೆಯೇ ಅಳುತ್ತಿದ್ದೆ. ಅಷ್ಟೇ ಅಲ್ಲದೆ, ಅಳುತ್ತಲೇ ಎಚ್ಚರಗೊಳ್ಳುತ್ತಿದ್ದೆ ಎಂದು ಕಹಿ ಕ್ಷಣವನ್ನು ನೆನಪಿಸಿಕೊಂಡರು.

ಅಂದಹಾಗೆ ನೀನಾ ಗುಪ್ತಾ ಮತ್ತು ಪಾವೈಲ್ ಗುಲಾಟಿ ಕೂಡ ಗುಡ್ ಬೈ ಚಿತ್ರದ ಭಾಗವಾಗಿದ್ದಾರೆ. ಅಕ್ಟೋಬರ್ 7 ರಂದು ಈ ಚಿತ್ರ ತೆರೆಗೆ ಬರುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net