ಒಂದೇ ದಿನದಲ್ಲಿ 72 ಲಕ್ಷ ರೂ. ಒಡೆಯನಾದ ಮೀನುಗಾರ: ಈ ಮೀನಿನ ಬಗ್ಗೆ ಕೇಳಿದ್ರೆ ಹುಬ್ಬೇರಿಸ್ತೀರಾ!

Pak Fisher Man
Published on

ಇಸ್ಲಮಾಬಾದ್​: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಹೌದು. ಪಾಕಿಸ್ತಾನ ಮೂಲದ ಮೀನುಗಾರನೊಬ್ಬ ತನ್ನ ಬಲೆಗೆ ಬಿದ್ದ 48 ಕೆ.ಜಿ. ತೂಕದ ಅಟ್ಲಾಂಟಿಕ್​ ಕ್ರೋಕರ್​ ಹೆಸರಿನ ವಿರಾಳಾತಿವಿರಳ ಮೀನನ್ನು ಬರೋಬ್ಬರರಿ 72 ಲಕ್ಷ ರೂಪಾಯಿ (46,706 ಡಾಲರ್​) ಗೆ ಮಾರಾಟ ಮಾಡಿದ್ದಾರೆ. ಪಾಕಿಸ್ತಾನದಲ್ಲೇ ಅತ್ಯಂತ ದುಬಾರಿ ಸಮುದ್ರ ಆಹಾರ ವ್ಯವಹಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿವೆ.

ಸಾಜಿದ್​ ಹಜಿ ಅಬಾಬ್ಕರ್​ ಹೆಸರಿನ ಮೀನುಗಾರನ ಬಲೆಗೆ ಬಲೂಚಿಸ್ತಾನ ಪ್ರಾಂತ್ಯದ ಗ್ವಾದಾರ್​ ಕರಾವಳಿ ಪ್ರದೇಶದಲ್ಲಿ ಈ ಮೀನು ಬಿದ್ದಿದೆ. ಮೀನಿನ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 86 ಲಕ್ಷಕ್ಕೆ ಮೀನು ಮಾರಾಟವಾಯಿತು. ಆದರೆ, ಸಾಂಪ್ರದಾಯಿಕ ರಿಯಾಯಿತಿ ಆಧಾರದ ಮೇಲೆ 72 ಲಕ್ಷ ರೂ.ಗೆ ಮೀನನ್ನು ನೀಡಲಾಯಿತು ಎಂದು ಅಬಾಬ್ಕರ್​ ಹೇಳಿದ್ದಾರೆ.

ಗ್ವಾದರ್​ನ ಮೀನುಗಾರಿಕೆ ಉಪನಿರ್ದೇಶಕ ಅಹ್ಮದ್ ನದೀಮ್ ಈ ಬಗ್ಗೆ ಮಾತನಾಡಿ, ಮೀನುಗಳನ್ನು ಇಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುವುದನ್ನು ನೋಡಿಯೇ ಇಲ್ಲ ಎಂದು ಹೇಳಿದರು.

ಯೂರೋಪ್​ ಮತ್ತು ಚೀನಾದಲ್ಲಿ ಅಟ್ಲಾಂಟಿಕ್​ ಕ್ರೋಕರ್​ ಮೀನಿನ ಮಾಂಸಕ್ಕೆ ಭಾರಿ ಬೇಡಿಕೆ ಇದೆ ಮತ್ತು ಅದರ ಚರ್ಮ ಮತ್ತು ಮೂಳೆಗಳನ್ನು ವೈದ್ಯಕೀಯ ವಿಜ್ಞಾನದಲ್ಲಿ ಬಳಸಿಕೊಳ್ಳಲಾಗುತ್ತದೆ.

ಇನ್ನು ಅಟ್ಲಾಂಟಿಕ್​ ಕ್ರೋಕರ್​ ಮೀನು ತನ್ನ ಮಾಂಸದಿಂದಲೇ ಬಹಳ ಪ್ರಸಿದ್ಧಿ. ಏಕೆಂದರೆ ಅದರ ಮಾಂಸ ತುಂಬಾ ದುಬಾರಿ. ಅಲ್ಲದೆ, ಇದು ಬಹುಪಯೋಗಿ ಆಗಿರುವುದರಿಂದಲೇ ಇಷ್ಟು ದುಬಾರಿ ಬೆಲೆಗೆ ಮಾರಾಟವಾಗಿದೆ.

ಇದೇ ರೀತಿಯ ಕ್ರೋಕರ್​ ಮೀನನ್ನು ಕಳೆದ ವಾರವು ಗ್ವಾದಾರ್​ನಲ್ಲಿ ಸರೆಹಿಡಿಯಲಾಗಿತ್ತು. ಈ ವೇಳೆ ಆ ಮೀನು 7.8 ಲಕ್ಷಕ್ಕೆ ಮಾರಾಟವಾಗಿತ್ತು. ಅಟ್ಲಾಂಟಿಕ್ ಕ್ರೋಕರ್ ಸಾಮಾನ್ಯವಾಗಿ 1.2 ಕೆ.ಜಿ ತೂಕವಿರುತ್ತದೆ. ಸ್ಟರ್ಜನ್ ಮೀನು ಸಾಮಾನ್ಯವಾಗಿ ವಾಣಿಜ್ಯಿಕವಾಗಿ ಹಿಡಿಯುವ ಭಾರವಾದ ಮೀನು. ಇದರ ತೂಕವು 20 ಕಿ.ಗ್ರಾಂನಿಂದ 90 ಕೆ.ಜಿ ವರೆಗೆ ತೂಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net