ಇಷ್ಟಲಿಂಗದ ಮಹತ್ವ ಅರಿತೇ ರಾಹುಲ್​ ಗಾಂಧಿ ಲಿಂಗಧಾರಣೆ ಪಡೆದರು: ಮುರುಘಾ ಶರಣರ ಹೇಳಿಕೆ

Rahul Istalinga
Published on

ಚಿತ್ರದುರ್ಗ: ಇಷ್ಟಲಿಂಗದ ಮಹತ್ವ ಅರಿತೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಲಿಂಗಧಾರಣೆಯನ್ನು ಪಡೆದರು. ಈ ವೇಳೆ ಅವರಿಗೆ ಬಸವಣ್ಣನವರ ಭಾವಚಿತ್ರವನ್ನು ನೀಡಲಾಯಿತು ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಕರ್ನಾಟಕ ಪ್ರವಾಸ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಇಂದು ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುರುಘಾ ಶರಣರು, ಇಂದು ರಾಹುಲ್ ಸೌಜನ್ಯದ ಸಂದರ್ಶನವಾಗಿತ್ತು. ಸಂವಾದದ ವೇಳೆ ಕೆಲಪ್ರಶ್ನೆಗಳನ್ನು ಮುಂದಿಟ್ಟು ಉತ್ತರವನ್ನ ಪಡೆಯೋಕೆ ಮುಂದಾಗಿದ್ದರು. ಬಸವ ತತ್ವ ಸಿದ್ಧಾಂತಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದೆವು ಎಂದರು.

ಕಾಯಕವೇ ಕೈಲಾಸವೆಂದು ಹೇಳಿದ್ದ ಬಸವಣ್ಣನ ತತ್ವಗಳ ಬಗ್ಗೆ ಹೇಳಲಾಯ್ತು. ಸಾಮಾಜಿಕ ಸಮಾನತೆ, ನಾವೆಲ್ಲರೂ ಒಂದೇ ಎಂಬ ತತ್ವ ಬಸವಣ್ಣನವರದ್ದು ಎಂದು ಹೇಳಿದೆವು. ಇದನ್ನು ಕೇಳಿದ ಬಳಿಕ ರಾಹುಲ್​ ಗಾಂಧಿ ಮೆಚ್ಚುಗೆ ವ್ಯಕ್ತ ಪಡಿಸಿದರು ಎಂದು ಮುರುಘಾ ಶರಣರು ತಿಳಿಸಿದರು.

ಯಾವ ರೀತಿಯಾಗಿ ಪ್ರಾರ್ಥನೆ ಮತ್ತು ಭಜನೆ ಹೇಗೆ ಮಾಡಬೇಕೆಂದು ರಾಹುಲ್​ ಗಾಂಧಿ ಪ್ರಶ್ನೆ ಮಾಡಿದರು. ಈ ವೇಳೆ ಇಷ್ಟಲಿಂಗವನ್ನು ಹೇಗೆ ಪೂಜೆ ಮಾಡುತ್ತೇವೆ ಎಂದು ಹೇಳಿದೆವು. ಒಮ್ಮೆ ಪೂಜೆ ಮಾಡಿ ತೋರಿಸಬಹುದಾ ಎಂದು ಕೇಳಿದರು. ಬಳಿಕ ಲಿಂಗ ಪೂಜೆಯನ್ನು ಮಾಡಿ ತೋರಿಸಲಾಯಿತು. ಕೂಡಲೇ ಇಷ್ಟಲಿಂಗ ಪಡೆಯಬಹುದಾ ಎಂದು ಮಠಾಧೀಶರೊಬ್ಬರು ಕೇಳಿದರು. ಕೂಡಲೇ ನನಗೆ ಆಸಕ್ತಿ ಇದೆ ಎಂದು ರಾಹುಲ್​ ಹೇಳಿದರು. ತಕ್ಷಣ ಹಣೆಗೆ ವಿಭೂತಿ ಧರಿಸಿ ಲಿಂಗಧಾರಣೆ ಮಾಡಿದೆವು ಎಂದು ಮುರುಘಾ ಶರಣರು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net