ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಪಂಜಾಬ್​ ಸಿಎಂ ಚನ್ನಿ ಸೋದರಳಿಯನನ್ನು ಬಂಧಿಸಿದ ಇಡಿ

Channi
Published on

ಚಂಡಿಗಢ: ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಡಿಯಲ್ಲಿ ಪಂಜಾಬ್​ ಮುಖ್ಯಮಂತ್ರಿ ಚರಂಜೀತ್​ ಸಿಂಗ್​ ಚನ್ನಿ ಅವರ ಸೋದರಳಿಯ ಭೂಪಿಂದರ್​ ಸಿಂಗ್​ ಹನಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ (ಫೆ.03) ತಡರಾತ್ರಿ ಬಂಧಿಸಿದೆ.

ಭೂಪಿಂದರ್​ ಸಿಂಗ್​ರನ್ನು ಇಡಿ ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಭೂಪಿಂದರ್​ಗೆ ಸಂಬಂಧಿಸಿದ ಸ್ಥಳದಲ್ಲಿ ಸುಮಾರು 7.9 ಕೋಟಿ ರೂ. ಮತ್ತು ಅವರ ಆಪ್ತ ಸಂದೀಪ್​ ಕುಮಾರ್​ ಮನೆಯಲ್ಲಿ 2 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ.

ವಶಪಡಿಸಿಕೊಳ್ಳಲಾದ ಹಣಕ್ಕೆ ಸಂಬಂಧಿಸಿದಂತೆ ಭೂಪಿಂದರ್​ ಸಿಂಗ್​ನ ಇಬ್ಬರು ಆಪ್ತರನ್ನು ವಿಚಾರಣೆ ನಡೆಸಲಾಗುತ್ತಿದೆ. ಮೂವರನ್ನು ಸಹ ಅಕ್ರಮ ಮರಳು ಗಣಿಗಾರಿಕೆ ಸುತ್ತ ನಡೆದಿರುವ ಅಕ್ರಮ ಹಣ ವರ್ಗಾವಣೆ ಸಂಬಂಧ ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅಕ್ರಮ ಮರಳು ದಂಧೆ ನಡೆಸಲು ಶೆಲ್ ಕಂಪನಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಶಂಕಿಸಲಾಗಿದೆ.

ಭೂಪಿಂದರ್ ಸಿಂಗ್, ಕುದ್ರತ್‌ದೀಪ್ ಸಿಂಗ್ ಮತ್ತು ಸಂದೀಪ್ ಕುಮಾರ್ ಪ್ರೊವೈಡರ್ಸ್ ಓವರ್‌ಸೀಸ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ ಕಂಪನಿಯ ನಿರ್ದೇಶಕರು ಎಂದು ಜಾರಿ ನಿರ್ದೇಶನಾಲಯದ ತನಿಖೆಗಳು ಬಹಿರಂಗಪಡಿಸಿವೆ. ಈ ಕಂಪನಿಯನ್ನು 2018ರ ಅಕ್ಟೋಬರ್​ನಲ್ಲಿ ಸ್ಥಾಪಿಸಲಾಗಿದೆ.

ಕಂಪನಿ ಸ್ಥಾಪನೆಯಾದ 6 ತಿಂಗಳಲ್ಲಿ ಆರೋಪಿ ಕುದ್ರತ್‌ದೀಪ್ ಸಿಂಗ್ ವಿರುದ್ಧ ಅಕ್ರಮ ಮರಳು ಗಣಿಗಾರಿಕೆ ಪ್ರಕರಣ ದಾಖಲಾಗಿದೆ. ಮರಳು ಗಣಿ ಗುತ್ತಿಗೆ ಪಡೆಯುವಲ್ಲಿ ಕಪ್ಪುಹಣ ಹೂಡಿಕೆ ಮಾಡಲಾಗಿದೆ ಎಂದು ಇಡಿ ಶಂಕೆ ವ್ಯಕ್ತಪಡಿಸಿದೆ. ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಜನರಿಗೆ ರಾಜ್ಯ ಸರ್ಕಾರ ಸಹಾಯ ಮಾಡುತ್ತಿದೆ ಎಂದು ಈ ಹಿಂದೆ ಪಂಜಾಬ್‌ನ ಪ್ರತಿಪಕ್ಷಗಳು ಆರೋಪಿಸಿದ್ದವು.

2021ರ ಡಿಸೆಂಬರ್​ನಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ)ವು ಸಿಎಂ ಚನ್ನಿ ಅವರ ಸ್ವಂತ ಕ್ಷೇತ್ರವಾದ ಚಮಕೌರ್ ಸಾಹಿಬ್‌ನಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಭಿವೃದ್ಧಿ ಹೊಂದುತ್ತಿದೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net