ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಕ್ರಮ: ಅಭ್ಯರ್ಥಿ ಶಶಿ ತರೂರ್​ ಬೆಂಬಲಿಗರ ಗಂಭೀರ ಆರೋಪ

Shashi Tarur
Published on

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್​ ಸಮಿತಿ (ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಹೊರ ಬೀಳುವ ಮುನ್ನವೇ ಅಭ್ಯರ್ಥಿ ಶಶಿ ತರೂರ್​ ಅವರ ಬೆಂಬಲಿಗರು ಗಂಭೀರ ಆರೋಪ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಮತದಾನ ವೇಳೆ ಅತ್ಯಂತ ಗಂಭೀರ ಅಕ್ರಮಗಳು ನಡೆದಿವೆ ಎಂದು ದೂರಿದ್ದಾರೆ.

ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ್ ಮಿಸ್ತ್ರಿ ಅವರಿಗೆ ಬರೆದ ಪತ್ರದಲ್ಲಿ ಶಶಿ ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೋಜ್, ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಚುನಾವಣಾ ಪ್ರಕ್ರಿಯೆಯು ವಿಶ್ವಾಸಾರ್ಹತೆ ಮತ್ತು ಸಮಗ್ರತೆಯನ್ನು ಹೊಂದಿಲ್ಲ. ಉತ್ತರ ಪ್ರದೇಶದಲ್ಲಿ ನಾವು ಕಂಡಿರುವುದು ಸಂಪೂರ್ಣವಾಗಿ ವಿಭಿನ್ನವಾಗಿದೆ. ಇದು ನಿಮ್ಮ ಕಚೇರಿಯ ಅಧಿಕಾರಕ್ಕೆ ಬಹಿರಂಗ ಸವಾಲಾಗಿದೆ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಮಾನ್ಯ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಆದೇಶಗಳನ್ನು ಇದು ಧಿಕ್ಕರಿಸಿದಂತಾಗುತ್ತದೆ ಎಂದು ಸಲ್ಮಾನ್ ಸೋಜ್​ ಆರೋಪ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗರು ಉತ್ತರ ಪ್ರದೇಶದಲ್ಲಿ ಹೇಗೆ ಚುನಾವಣಾ ಅಕ್ರಮದಲ್ಲಿ ತೊಡಗಿದ್ದಾರೆ ಎಂಬುದು ಖರ್ಗೆ ಅವರ ಗಮನಕ್ಕೆ ಬಂದಿದೆಯೋ ಎಂಬುದಕ್ಕೆ ನಮ್ಮ ಬಳಿ ಯಾವುದೇ ಪುರಾವೆಗಳಿಲ್ಲ. ನಾವು ಎಂದಿನಂತೆ ವ್ಯವಹಾರವನ್ನು ಸ್ವೀಕರಿಸಲು ಈ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಈ ಚುನಾವಣೆಯ ಸಮಗ್ರತೆಗಾಗಿ ನಾವು ಹೋರಾಡಲು ಸಿದ್ಧರಿದ್ದೇವೆ ಎಂದಿದ್ದಾರೆ.

ಈ ಚುನಾವಣೆಯಲ್ಲಿ ವಂಚನೆ ನಡೆದಿರುವ ಶಂಕೆ ಇದೆ. ಉತ್ತರ ಪ್ರದೇಶದ ಕಲುಷಿತ ಪ್ರಕ್ರಿಯೆಗೆ ಅವಕಾಶ ನೀಡಿದ್ದಲ್ಲಿ, ಈ ಚುನಾವಣೆಯನ್ನು ಹೇಗೆ ಮುಕ್ತ ಮತ್ತು ನ್ಯಾಯಯುತವೆಂದು ಪರಿಗಣಿಸಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net