ಮೇಕೆ ಕಳ್ಳರನ್ನು ಚೇಸ್​ ಮಾಡಿದ ಇನ್ಸ್​ಪೆಕ್ಟರ್​ ಬರ್ಬರ ಹತ್ಯೆ: ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

Bhuminathan
Published on

ಪುದುಕ್ಕೊಟ್ಟೈ: ಮೇಕೆ ಕಳ್ಳರನ್ನು ಹಿಡಿಯಲು ಹೋದ ಸಹಾಯಕ​ ಇನ್ಸ್​ಪೆಕ್ಟರ್​ನನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ತಮಿಳುನಾಡಿನ ಪುದುಕ್ಕೊಟ್ಟೈಯಲ್ಲಿ ನಡೆದಿದೆ.

ತಿರುಚಿರಾಪಳ್ಳಿ ಜಿಲ್ಲೆಯ ನವಲ್ಪಟ್ಟು ಪೊಲೀಸ್​ ಠಾಣೆಯಲ್ಲಿ ವಿಶೇಷ ಸಹಾಯಕ ಇನ್ಸ್​ಪೆಕ್ಸರ್​ ಆಗಿದ್ದ ಭೂಮಿನಾಥನ್ (50)​ ಕೊಲೆಯಾಗಿದ್ದಾರೆ. ಭಾನುವಾರ ರಾತ್ರಿ ಗಸ್ತಿನಲ್ಲಿದ್ದ ಭೂಮಿನಾಥನ್​, ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ತಲೆಗೆ ದಾಳಿ ಮಾಡಿದ್ದಾರೆ. ತಲೆ ಹೊಡೆದು ಹೋಗಿದ್ದು ತೀವ್ರ ರಕ್ತಸ್ರಾವವಾಗಿದ್ದು, ರಕ್ತದ ಮಡುವಿನಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಮೇಕೆಗಳನ್ನು ಕಳ್ಳತನ ಮಾಡಿ, ಅದನ್ನು ದ್ವಿಚಕ್ರ ವಾಹನದಲ್ಲಿ ಹಾಕಿಕೊಂಡು ನವಲ್ಪಟ್ಟು ಬಾರ್ಡರ್​ನಲ್ಲಿ ಸಾಗುತ್ತಿದ್ದಾಗ, ಗಸ್ತಿನಲ್ಲಿದ್ದ ಭೂಮಿನಾಥನ್​ ಖದೀಮರನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಇನ್ಸ್​ಪೆಕ್ಟರ್​ ಮೇಲೆಯೇ ದಾಳಿ ಮಾಡಿರುವ ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಕುಡುಗೋಲಿನಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿ ಆಗಿದ್ದಾರೆಂದು ತಿಳಿದುಬಂದಿದೆ. ತಿರುಚಿರಾಪಳ್ಳಿ - ಪುದುಕೋಟ್ಟೈ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೀರನೂರು ಠಾಣಾ ವ್ಯಾಪ್ತಿಯಲ್ಲಿ ಭೂಮಿನಾಥನ್ ಹತ್ಯೆಯಾಗಿದೆ.

ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮೇಕೆ ಕಳ್ಳತನ ಪ್ರಕರಣ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಭೂಮಿನಾಥನ್​ ಗಸ್ತಿನಲ್ಲಿದ್ದರು. ಕರ್ನಾಟಕದ ರಾಮನಗರ ಮತ್ತು ತಮಿಳುನಾಡಿನಲ್ಲು ಮೇಕೆ ಕಳ್ಳತನ ಪ್ರಕರಣಗಳಿವೆ. ಖದೀಮರು ಜೈಲಿನಿಂದ ಹೊರ ಬಂದು ಮತ್ತೆ ಕಳ್ಳತನ ಮಾಡ್ತಿದ್ರು. ಸದ್ಯ ಆರೋಪಿಗಳನ್ನು ಬಂಧಿಸಲು ಇಬ್ಬರು ತನಿಖಾಧಿಕಾರಿಗಳು ಮತ್ತು ಇಬ್ಬರ ಉಪ ತನಿಖಾಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲು ತಿರುಚಿರಾಪಳ್ಳಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಶಾ ಪಾರ್ಥಿಬನ್​, ಡಿಸಿಪಿಗಳಾ ಶಿವಸುಬ್ರಮಣಿಯನ್​ ಮತ್ತು ಅರುಣಮೋಳಿ ಅರಸುಗೆ ಆದೇಶಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net