

ಬೆಂಗಳೂರು: ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ)ದ ದಾಳಿಯ ಬೆನ್ನಲ್ಲೇ ಫುಲ್ ಅಲರ್ಟ್ ಆಗಿರುವ ರಾಜ್ಯ ಪೊಲೀಸ್ ಇಲಾಖೆ, ಎನ್ಐಎ ಮಾಹಿತಿ ಆಧರಿಸಿ, ರಾಜ್ಯದ ವಿವಿಧೆಡೆ ಪಾಫುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ನಾಯಕರು ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದೆ.
ದಕ್ಷಿಣ ಕನ್ನಡ, ವಿಜಯಪುರ, ಶಿವಮೊಗ್ಗ, ರಾಮನಗರ, ಕೋಲಾರ, ಉಡುಪಿ, ರಾಯಚೂರು, ಚಾಮರಾಜನಗರ ಹಾಗೂ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರ ಮನೆಗಳ ಮೇಲೆ ರಾಜ್ಯದ ಪೊಲೀಸರು ದಾಳಿ ಮಾಡಿದ್ದಾರೆ.
ದಾಳಿಯ ವೇಳೆ ಸುಮಾರು 40 ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದ್ದು, ಎಲ್ಲರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಎನ್ಐಎ ಬಳಿಕ ನಡೆದಿರುವ ಎರಡನೇ ಹಂತದ ದಾಳಿ ಇದಾಗಿದೆ.
ಮೊದಲ ಬಾರಿಗೆ ಎನ್ಐಎ ದಾಳಿ ನಡೆಸಿತ್ತು. ಇದೀಗ ಎನ್ಐಎ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ರಾಜ್ಯ ಪೊಲೀಸರು ಈ ದಾಳಿ ನಡೆಸಿದ್ದಾರೆ. ಎನ್ಐಎ ದಾಳಿ ವಿರೋಧಿಸಿ, ಪ್ರತಿಭಟನೆ ಮಾಡಿ, ಆ ಪ್ರತಿಭಟನೆಯನ್ನು ವಿದ್ವಂಸಕ ಕೃತ್ಯಕ್ಕೆ ತಿರುಗಿಸಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ರಾಜ್ಯದಲ್ಲಿ ವಿದ್ವಂಸಕ ಕೃತ್ಯಗಳು ನಡೆಯಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಪೊಲೀಸರು ಪಿಎಫ್ಐ ಮೇಲೆ ದಾಳಿ ಮಾಡಿದ್ದು, ಕೆಲ ಮುಖಂಡರು ಮತ್ತು ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ವಿಚಾರಣೆಯನ್ನು ಮುಂದುವರಿಸಿದ್ದಾರೆ.