ಆತ್ಮಹತ್ಯೆ ತಡೆಗೆ ಹಾಸ್ಟೆಲ್​ನಲ್ಲಿ ಸೀಲಿಂಗ್​ ಫ್ಯಾನ್ಸ್​ ತೆರವು: ವಿರೋಧದ ಮಧ್ಯೆಯೂ ಬೆಂಗ್ಳೂರಿನ IISc ಕಾರ್ಯಾಚರಣೆ

Fans'
Published on

ಬೆಂಗಳೂರು: ಕಾಲೇಜು ಕ್ಯಾಂಪಸ್​ನಲ್ಲಿ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ)ಯ ಅಧಿಕಾರಿಗಳು ಹಾಸ್ಟೆಲ್​ ರೂಮ್​ಗಳಲ್ಲಿರುವ ಸೀಲಿಂಗ್​ ಫ್ಯಾನ್​ಗಳನ್ನು ತೆರವುಗೊಳಿಸುತ್ತಿರುವುದಾಗಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷದಲ್ಲಿ ಕ್ಯಾಂಪಸ್​ ಒಳಗೆ ಆರು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಫ್ಯಾನ್​ಗಳನ್ನು ತೆಗೆಯುವ ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.

ಹಾಸ್ಟೆಲ್​ನಲ್ಲಿ ಸೀಲಿಂಗ್​ ಫ್ಯಾನ್​ಗಳನ್ನು ತೆಗೆದು ಅದರ ಬದಲಾಗಿ ನೇರವಾಗಿ ಗೋಡೆಗೆ ಅಳವಡಿಸಬಹುದಾದಂತಹ ವಾಲ್​ ಮೌಂಟೆಡ್​ ಫ್ಯಾನ್​ಗಳನ್ನು ಹಾಕುತ್ತಿದ್ದಾರೆ ಎಂದು ಅಲ್ಲಿನ ವಿದ್ಯಾರ್ಥಿಗಳು, ವಿದ್ಯಾರ್ಥಿ ಮಂಡಳಿಯ ಮುಖ್ಯಸ್ಥರಿಗೆ ಈಮೇಲ್​ ಮಾಡಿ ತಿಳಿಸಿದ್ದಾರೆ. 15 ದಿನಗಳ ಒಳಗೆ ಐಐಎಸ್​ಸಿ ಕ್ಯಾಂಪಸ್​ ಒಳಗಿರುವ ಹಾಸ್ಟೆಲ್​ಗಳಲ್ಲಿನ ಎಲ್ಲ ಸೀಲಿಂಗ್​ ಫ್ಯಾನ್​ಗಳನ್ನು ತೆಗೆಯುವುದಾಗಿ ಕಾರ್ಮಿಕರು ಹೇಳಿದ್ದಾರೆಂದು ವಿದ್ಯಾರ್ಥಿಗಳು ಈಮೇಲ್​ನಲ್ಲಿ ಉಲ್ಲೇಖಿಸಿದ್ದಾರೆ.

ಸೀಲಿಂಗ್​ ಫ್ಯಾನ್​ ತೆಗೆಯುವ ನಿರ್ಧಾರ ಸರಿಯೇ ಎಂಬುದರ ಬಗ್ಗೆ ಸಮೀಕ್ಷೆಯೊಂದು ನಡೆದಿದ್ದು, ಶೇ. 89 ವಿದ್ಯಾರ್ಥಿಗಳು ಇದನ್ನು ವಿರೋಧಿಸಿದ್ದಾರೆ. ಉಳಿದ ವಿದ್ಯಾರ್ಥಿಗಳು ಈ ನಿರ್ಧಾರದ ಬಗ್ಗೆ ಚಿಂತೆಯೂ ಮಾಡಿಲ್ಲ. ವಿದ್ಯಾರ್ಥಿಗಳು ನಡೆಸಿದ ಸಮೀಕ್ಷೆಯನ್ನು ವಿದ್ಯಾರ್ಥಿ ಮಂಡಳಿಯ ಮುಖ್ಯಸ್ಥರಿಗೆ ಈಮೇಲ್​ ಜತೆಗೆ ಲಗತ್ತಿಸಲಾಗಿದೆ. ಫ್ಯಾನ್​ ಬದಲಿಸುವುದರಿಂದ ಆತ್ಮಹತ್ಯೆಯನ್ನು ತಡೆಯಲಾಗದು ಎಂಬುದು ಶೇ. 89 ವಿದ್ಯಾರ್ಥಿಗಳ ಅಭಿಪ್ರಾಯವೂ ಆಗಿದೆ.

ಐಐಎಸ್​ಸಿ ಮ್ಯಾನೇಜ್​ಮೆಂಟ್​ ತೆಗೆದುಕೊಂಡಿರುವ ನಿರ್ಧಾರವು ಅವೈಜ್ಞಾನಿಕ ಕ್ರಮವಾಗಿದೆ ಎಂದು ಯುವ ಆಪ್ತ ಸಮಾಲೋಚಕರು ಹಾಗೂ ಸಮುದ್ರ ಫೌಂಡೇಶನ್​ನ ಸಿಇಒ ಭಾರತಿ ಸಿಂಗ್​ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದನ್ನು ತಿಳಿದುಕೊಳ್ಳಲು ತಳಮಟ್ಟದಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳಲ್ಲಿರುವ ಆತಂಕ ನಿವಾರಣೆಗೆ ಸಮಾಲೋಚಕರಿಂದ ಪರಿಹಾರ ಒದಗಿಸುವಂತಹ ಕೆಲಸ ಮಾಡಬೇಕು. ಇಲ್ಲಿ ಓದಿನ ಒತ್ತಡದ ಜತೆಗೆ ವೈಯಕ್ತಿಕ ಕಾರಣವೂ ಇರುತ್ತದೆ. ಅದನ್ನು ಬಿಟ್ಟು ಈ ರೀತಿಯ ನಿರ್ಧಾರ ಸಮಂಜಸವಲ್ಲ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಬೆಂಬಲವನ್ನು ಒದಗಿಸಲು ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಕ್ಷೇಮ ಕೇಂದ್ರವು ಪರಿಣಾಮಕಾರಿಯಾಗಿಲ್ಲ ಮತ್ತು ಅದನ್ನು ಸುಧಾರಿಸಲು ಕರೆಗಳು ಬರುತ್ತಿವೆ ಎಂದು ಐಐಎಸ್​​ಸಿನಲ್ಲಿನ ವಿದ್ಯಾರ್ಥಿ ಪರಿಷತ್ ಸದಸ್ಯರೊಬ್ಬರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net