

ಮುಂಬೈ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್)ಯ ಯುವ ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ರನ್ನು ತಡೆದು ಭದ್ರತಾ ತಪಾಸಣೆ ನಡೆಸುವ ಮೂಲಕ ರಾತ್ರೋರಾತ್ರಿ ರಿಯಲ್ ಹೀರೋ ಆಗಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಭಾರೀ ಮೆಚ್ಚುಗೆಗು ಪಾತ್ರರಾಗಿದ್ದಾರೆ.
ಯುವ ಅಧಿಕಾರಿ ಸೋಮನಾಥ್ ಮೊಹಂತಿ ಒಡಿಶಾದ ನಯಾಗಢ ಜಿಲ್ಲೆಯ ಪನಿಕೊಯ್ಲಿ ಮೂಲದವರು. ಟೈಗರ್ 3 ಚಿತ್ರದ ಚಿತ್ರೀಕರಣಕ್ಕಾಗಿ ಸಲ್ಮಾನ್ ಖಾನ್ ಅವರು ವಿದೇಶಕ್ಕೆ ತೆರಳೆಂದು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮೊಹಂತಿ ಏರ್ಪೋರ್ಟ್ನಲ್ಲಿ ಕರ್ತವ್ಯದಲ್ಲಿದ್ದರು. ಬಹುತೇಕರು ವಿಐಪಿಗಳು ಬಂದಾಗ ಭದ್ರತಾ ತಪಾಸಣೆ ನಡೆಸಲು ಹಿಂಜರಿಯುತ್ತಾರೆ. ಆದರೆ, ಯಾವುದಕ್ಕೂ ಕ್ಯಾರೆ ಎನ್ನದೇ ಮೊಹಂತಿ ಅವರು ಸಲ್ಮಾನ್ ಭದ್ರತಾ ತಪಾಸಣೆ ನಡೆಸಿ ಕಳುಹಿಸಿದ್ದಾರೆ.
ಭದ್ರತಾ ತಪಾಸಣೆ ಮಾಡಿದ್ದಲ್ಲದೆ, ಸಲ್ಮಾನ್ ಖಾನ್ರನ್ನು ತಡೆದು ಸಾಮಾನ್ಯ ಜನರ ರೀತಿ ಸಾಲಿನಲ್ಲಿ ನಿಲ್ಲುವಂತೆಯು ಮತ್ತು ದಾಖಲಾತಿಗಳನ್ನು ತೋರಿಸುವಂತೆ ಹೇಳಿದರು. ಇದು ಕೂಡ ಮೊಹಂತಿ ಅವರ ಕರ್ತವ್ಯ ಪ್ರಜ್ಞೆಯನ್ನು ತೋರಿಸುತ್ತದೆ. ಮೊಹಂತಿ ನಡೆಯಿಂದ ಸಲ್ಮಾನ್ ಖಾನ್ ಕೊಂಚ ಅಚ್ಚರಿಗೊಂಡರು ಕೂಡ ಅವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತನ್ನ ಜತೆಗಿದ್ದವರಿಗೂ ಅವರು ಹೇಳಿದಂತೆ ಕೇಳಿ ಎನ್ನುವ ಮೂಲಕ ಸಲ್ಮಾನ್ ಕೂಡ ತಮ್ಮ ಸರಳೆಯನ್ನು ಮೆರೆದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮೊಹಂತಿ ಅವರಿಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ. ಮೊಹಂತಿ ಅವರು ನಿಜವಾದ ಹೀರೋ ಎಂದು ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)