ನಯನತಾರಾ-ವಿಘ್ನೇಶ್​ ಶಿವನ್​ ಮದುವೆ ದಿನಾಂಕ ಫಿಕ್ಸ್​: ಇಬ್ಬರಿಗೂ ಇಷ್ಟವಾದ ಸ್ಥಳದಲ್ಲೇ ವಿವಾಹ!

Nayanathara
Published on

ಚೆನ್ನೈ: ‘ಲೇಡಿ ಸೂಪರ್​ಸ್ಟಾರ್’ ಬಿರುದಾಂಕಿತೆ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್​ ಶಿವನ್​ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್​ ಮಾಡುತ್ತಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕಳೆದ 2 ವರ್ಷಗಳಿಂದ ಬರುತ್ತಲೇ ಇದೆ. ಆದರೆ, ಅದೇಕೋ ಅವರಿಬ್ಬರೂ ಮದುವೆ ಆಗುವ ಘಳಿಗೆ ಇನ್ನೂ ಬಂದಿಲ್ಲ. ಇದರ ನಡುವೆ ಇಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದೀಗ ಎಲ್ಲದಕ್ಕೂ ಪೂರ್ಣ ವಿರಾಮ ಬಿದ್ದಿದ್ದು, ಕೊನೆಗೂ ತಾರಾದಂಪತಿಯ ಮದುವೆಗೆ ದಿನಾಂಕದ ಜತೆಗೆ ಸ್ಥಳವೂ ನಿಗದಿಯಾಗಿದ್ದು, ಬಹುಕಾಲದ ಕುತೂಹಲಕ್ಕೆ ತೆರೆಬಿದ್ದಿದೆ.

ಹೌದು, ನಯನತಾರಾ ಮತ್ತು ವಿಘ್ನೇಶ್​ ಶಿವನ್ ಜೂನ್​ 9ರಂದು ತಮ್ಮ ಇಷ್ಟದ ಸ್ಥಳವಾದ ತಿರುಪತಿ ದೇವಸ್ಥಾನದಲ್ಲಿ ಮದುವೆ ಆಗಲಿದ್ದಾರೆ. ಇದಾದ ಬಳಿಕ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಗೆ ಮಾಲ್ಡೀವ್ಸ್​ನಲ್ಲಿ ಮದುವೆ ಪಾರ್ಟಿಯನ್ನು ಆಯೋಜಿಸಿದ್ದಾರೆ ಎಂಬ ಸುದ್ದಿ ಕಾಲಿವುಡ್​ ಗಲ್ಲಿಯಿಂದ ಕೇಳಿಬಂದಿದೆ.

ಅಂದಹಾಗೆ ನಯನಾ ಮತ್ತು ವಿಘ್ನೇಶ್​ ನಿಯಮಿತವಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ಮಾಡುತ್ತಿರುತ್ತಾರೆ. ಇಬ್ಬರಿಗೆ ಈ ಸ್ಥಳ ತುಂಬಾ ಇಷ್ಟ. ವಿಘ್ನೇಶ್​ ನಿರ್ದೇಶನದ ನಯನತಾರಾ, ಸಮಂತಾ ಹಾಗೂ ವಿಜಯ್​ ಸೇತುಪತಿ ನಟನೆಯ ಕಾತುವಾಕುಲ ರೆಂಡು ಕಾದಲ್​ ಸಿನಿಮಾ ಏಪ್ರಿಲ್​ 28ರಂದು ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್​ ಪಡೆದುಕೊಂಡಿದೆ. ಅಲ್ಲದೆ, ತಾರಾದಂಪತಿ ಇತ್ತೀಚೆಗಷ್ಟೇ ತಿರುಪತಿಗೆ ಭೇಟಿ ನೀಡಿ ಬಂದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ವಿಘ್ನೇಶ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

2011ರಲ್ಲಿ ತೆರೆಕಂಡ ‘ಶ್ರೀ ರಾಮ ರಾಜ್ಯಂ’ ಸಿನಿಮಾದ ಮೂಲಕ ಸಿನಿಮಾದಿಂದ ವಿರಾಮ ಪಡೆದಿದ್ದ ನಯನತಾರಾ, 2015ರಲ್ಲಿ ವಿಘ್ನೇಶ್ ಶಿವನ್ ಅಭಿನಯದ ‘ನಾನೂಂ ರೌಡಿ ಥಾನ್’ ಸಿನಿಮಾದಿಂದ ಮತ್ತೆ ಬಣ್ಣದ ಜಗತ್ತಿನ ಹೊಸ ಪ್ರಯಾಣವನ್ನು ಆರಂಭಿಸಿದ್ದಾರೆ. ನಾನು ರೌಡಿ ಥಾನ್​ ಚಿತ್ರದ ಸೆಟ್‌ನಲ್ಲೇ ನಯನಾ ಮತ್ತು ವಿಘ್ನೇಶ್​ ನಡುವೆ ಪ್ರೇಮಾಂಕುರವಾಗಿತ್ತು. ಚಿತ್ರವು ಸೂಪರ್ ಹಿಟ್ ಆಯಿತು ಮತ್ತು ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net