

ಕೊಯಿಕ್ಕೋಡ್: ದೇಶದ ಅತಿ ಕಿರಿಯ ಮೇಯರ್ ಹಾಗೂ ಅತಿ ಕಿರಿಯ ಶಾಸಕರ ನಡುವೆ ಮದುವೆ ನಿಗದಿಯಾಗಿದ್ದು, ದೇಶದಲ್ಲೇ ವಿನೂತನ ಮದುವೆ ಸಂಭ್ರಮಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಲಿದೆ.
ತಿರುವನಂತಪುರದ ಮೇಯರ್ ಆರ್ಯಾ ರಾಜೇಂದ್ರನ್ (21) ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್ (28) ವಿವಾಹ ಮಾಡಿಕೊಳ್ಳಲಿದ್ದಾರೆ. ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇಬ್ಬರು ಪರಸ್ಪರ ಪರಿಚಿತರಾಗಿದ್ದಾರೆ. ಇನ್ನೊಂದು ತಿಂಗಳಲ್ಲಿ ಇಬ್ಬರ ಮದುವೆ ನೆರವೇರಲಿದೆ.
ಈ ಬಗ್ಗೆ ಮಾತನಾಡಿರುವ ಶಾಸಕ ಸಚಿನ್ ತಂದೆ ಕೆ.ಎಂ. ನಂದಕುಮಾರ್, ಇನ್ನು ಮದುವೆ ದಿನಾಂಕ ಘೋಷಣೆಯಾಗಿಲ್ಲ. ಆದರೆ, ಎರಡು ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿವೆ. ಸಚಿನ್ ಕೇರಳ ವಿಧಾನಸಭೆಯ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನೊಂದೆಡೆ ಆರ್ಯಾ ರಾಜೇಂದ್ರನ್ ದೇಶದ ಕಿರಿಯ ಮೇಯರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಸ್ಎಫ್ಐ ಸಂಘಟನೆಯ ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿರುವ ಶಾಸಕ ಸಚಿನ್ ದೇವ್ ಕೊಯಿಕ್ಕೋಡ್ನ ನೆಲ್ಲಿಕೋಡ್ ಮೂಲದವರು. ಎಸ್ಎಫ್ಐನ ರಾಜ್ಯ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಬಲುಸ್ಸೆರಿ ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಿದ್ದರು. ಸಚಿನ್ ಅವರು ಕೊಯಿಕ್ಕೂಡ್ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಮತ್ತು ಕೊಯಿಕ್ಕೋಡ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.
ಆರ್ಯಾ ರಾಜೇಂದ್ರನ್ ಅವರು 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ತಿರುವನಂತಪುರದ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇಬ್ಬರ ಮದುವೆ ಫಿಕ್ಸ್ ಆಗಿದ್ದು, ವಿನೂತನ ಮದುವೆಗೆ ಕೇರಳ ರಾಜ್ಯ ಸಾಕ್ಷಿಯಾಗಲಿದೆ. (ಏಜೆನ್ಸೀಸ್)