ಹೈಕೋರ್ಟ್​ ಆದೇಶ ಪಾಲಿಸದೇ ಹಿಜಾಬ್ ಧರಿಸಿಕೊಂಡೇ ಕಾಲೇಜು ಪ್ರವೇಶಿಸುತ್ತಿರುವ ವಿದ್ಯಾರ್ಥಿನಿಯರು

Hijab Row
Published on

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್​-ಕೇಸರಿ ಶಾಲೂ ಸಂಘರ್ಷದ ನಡುವೆ ಇಂದು ಕಾಲೇಜುಗಳು ಆರಂಭವಾಗಿವೆ. ಆದಾಗ್ಯೂ ಹಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುವ ಮೂಲಕ ಹೈಕೋರ್ಟ್​ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ್ದಾರೆ.

ಮತ್ತೆ ಗಲಾಟೆ ಆಗಬಹುದು ಅನ್ನುವ ದೃಷ್ಟಿಯಿಂದ ಕಳೆದ ಬಾರಿ ತೀವ್ರ ಗಲಾಟೆಗಳು ನಡೆದ ಕಾಲೇಜುಗಳಲ್ಲಿ ರಜೆಯನ್ನು ಮುಂದುವರಿಸಲಾಗಿದೆ. ಬಹುತೇಕ ಎಲ್ಲ ಕಡೆ ಕಾಲೇಜುಗಳು ಪುನಾರಂಭವಾಗಿದ್ದು, ಕೆಲವಡೆ ವಿದ್ಯಾರ್ಥಿಗಳು ಹೈಕೋರ್ಟ್​ ಆದೇಶವನ್ನು ಪಾಲಿಸಿದರೆ, ಇನ್ನು ಕೆಲವೆಡೆ ಹಿಜಾಬ್​ ಧರಿಸಿ ಬರುವ ಮೂಲಕ ಆದೇಶವನ್ನು ಧಿಕ್ಕರಿಸಿದ್ದಾರೆ.

ಯಾದಗಿರಿಯ ಜ್ಯೂನಿಯರ್ ಕಾಲೇಜು ಹಾಗೂ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್​ ವಿವಾದ ಹೆಚ್ಚಾಗಿದ್ದು, ನಾವು ಬುರ್ಖಾ, ಹಿಜಾಬ್ ಧರಿಸುವುದು ಬೇಡ ಅಂದರೆ ನಮಗೆ ಶಿಕ್ಷಣವೇ ಬೇಡ ಎಂದು ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ನಾವು ಹಿಜಾಬ್ ಧರಿಸಿಯೇ ಒಳಗಡೆ ಹೋಗುವುದು ಇಲ್ಲ ಅಂದರೆ ಇಲ್ಲೇ ಕೂರುತ್ತೇವೆ. ಇಷ್ಟು ದಿನ ಇಲ್ಲದ ಕಾನೂನು ಈಗ ಯಾಕೆ? ನಾವು ಹಿಜಾಬ್ ಬಿಟ್ಟು ಹೋಗಲ್ಲ. ನಮಗೆ ಹಿಜಾಬ್ ಮಾತ್ರ ಮುಖ್ಯ ಎಂದು ಪೋಷಕರು ಹಾಗೂ ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿದ್ದಾರೆ.

ಬೀದರ್ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಇದೇ ಪರಿಸ್ಥಿತಿ ಇದೆ. ಹಿಜಾಬ್ ಧರಿಸಿಕೊಂಡು ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿದ್ದಾರೆ. ಹಿಜಾಬ್ ತೆಗೆದು ತರಗತಿ ಒಳಗೆ ಬರುವಂತೆ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರ ವಿನಂತಿ ಮಾಡಿಕೊಂಡರು, ವಿದ್ಯಾರ್ಥಿನಿಯರು ಮೊಂಡುತನ ಪ್ರದರ್ಶನ ಮಾಡಿದ್ದಾರೆ.

ವಿಜಯಪುರ, ಹಾಸನ, ತುಮಕೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿಯೇ ಬರುತ್ತಿದ್ದಾರೆ. ಆದರೆ, ಹಲವೆಡೆ ಹಿಜಾಬ್​ ಮತ್ತು ಬುರ್ಖಾ ಧರಿಸಿ ಬಂದರೂ ಕೂಡ ಕಾಲೇಜು ಒಳಗಡೆ ಹೋಗುವಾಗ ಅದನ್ನು ತೆಗೆದಿಟ್ಟ ಹೋಗುತ್ತಿದ್ದಾರೆ.

ಇನ್ನು ಕಾಲೇಜುಗಳಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಸಹ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿಗಳು ಸಹ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಅಲ್ಲದೆ, ಕಾಲೇಜುಗಳಲ್ಲಿ 144 ಸೆಕ್ಷನ್​ ಸಹ ವಿಧಿಸಲಾಗಿದೆ.

ಸಾಕಷ್ಟು ಭದ್ರತೆಯೊಂದಿಗೆ ಕಾಲೇಜುಗಳನ್ನು ಆರಂಭಿಸಿದರೂ ಸಹ ಹಿಜಾಬ್​ ಸಂಘರ್ಷ ಮಾತ್ರ ಹಾಗೇ ಮುಂದುವರಿದಿದೆ. ಇನ್ನೊಂದೆಡೆ ಹಿಜಾಬ್​ ವಿವಾದದ ವಿಚಾರಣೆ ಹೈಕೋರ್ಟ್​ ವಿಸ್ತೃತ ಪೀಠದಲ್ಲಿ ನಡೆಯುತ್ತಿದ್ದು, ಇಂದು ಸಹ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಆರಂಭವಾಗಲಿದ್ದು, ಹೈಕೋರ್ಟ್​ ತೀರ್ಪಿಗೆ ಇಡೀ ದೇಶವೇ ಎದುರು ನೋಡುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net