

ನವದೆಹಲಿ: ಅನ್ಯಗ್ರಹ ಜೀವಿ ಏಲಿಯನ್‌ಗಳ ಇರುವಿಕೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ಅಧ್ಯಯನಗಳು ನಡೆಯುತ್ತಿದ್ದು, ಇನ್ನೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಕೆಲವರು ಈ ಜೀವಿ ಇರುವುದು ನಿಜ ಎಂದಿದ್ದರೆ, ಅಂಥ ಜೀವಿಗಳೇ ಇಲ್ಲ ಎನ್ನುವುದು ಇನ್ನು ಕೆಲವರ ವಾದ.
ನಾಸಾದಂತಹ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಭೂಮಿಯಿಂದಾಚೆಗಿನ ಜೀವ ಜಗತ್ತಿನ ಕುರುಹು ಪತ್ತೆ ಮಾಡುವಲ್ಲಿ ಪ್ರಯತ್ನ ಮಾಡುತ್ತಿವೆ. ವಿಶ್ವದಲ್ಲಿ ಮಾನವರ ಇರುವಿಕೆಯನ್ನು ತಿಳಿಸಲು ಅನೇಕ ರೆಡಿಯೋ ಸಿಗ್ನಲ್ಗಳನ್ನು ಮನುಷ್ಯ ಪ್ರಸಾರ ಮಾಡಿದರೂ ಸಹ, ಅನ್ಯಗ್ರಹ ಜೀವಿಗಳಾದ ಏಲಿಯನ್ಗಳು ಇವೆ ಎಂದು ದೃಢೀಕರಿಸುವ ಯಾವುದೇ ಪುರಾವೆಯನ್ನು ಪತ್ತೆಹಚ್ಚುವಲ್ಲಿ ವಿಜ್ಞಾನಿಗಳು ಇನ್ನು ಯಶಸ್ಸು ಸಾಧಿಸಿಲ್ಲ. ಏಲಿಯನ್ ಸಂಪರ್ಕ ಸಾಧಿಸಲು ಮಾನವ ಪ್ರಯತ್ನಿಸುತ್ತಿದ್ದು, ಅನ್ಯಗ್ರಹ ಜೀವಿಗಳು ಇರುವ ಬಗ್ಗೆ ಅನೇಕ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳಲ್ಲಿ ಬಲವಾದ ನಂಬಿಕೆ ಇದೆ.
ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ನಾಸಾ ಏಲಿಯನ್‌ಗಳ ಜತೆ ಸಂಪರ್ಕ ಸಾಧಿಸಲು ವಿನೂತನ ಯೋಜನೆಯೊಂದನ್ನು ರೂಪಿಸಿದೆ. ಮಹಿಳೆ ಮತ್ತು ಪುರುಷರ ಬೆತ್ತಲೆ ಫೋಟೋಗಳನ್ನು ಬಾಹ್ಯಾಕಾಶಕ್ಕೆ ಲಾಂಚ್ ಮಾಡುವ ಮೂಲಕ ಏಲಿಯನ್ಗಳಿಗೆ ಆಮಿವೊಡ್ಡಿ ಮಾನವರನ್ನು ಸಂಪರ್ಕಿಸಲು ಯತ್ನಿಸುವಂತೆ ಪ್ರೇರೇಪಿಸುವ ಯೋಜನೆಗೆ ಕೈಹಾಕಿದೆ.
ಬಾಹ್ಯಾಕಾಶಕ್ಕೆ ಲಾಂಚ್ ಮಾಡುವ ಬೆತ್ತಲೆ ಫೋಟೋಗ್ರಾಫ್ಗಳು ಕೇವಲ ಗ್ರಾಫಿಕ್ ಮಾತ್ರವಾಗಿರುವುದಿಲ್ಲ. ಬದಲಾಗಿ ಡಿಎನ್ಎ ಚಿತ್ರಣದ ಪಕ್ಕದಲ್ಲಿ ಕೈಬೀಸಿ ಕರೆಯುತ್ತಿರುವಂತೆ ಬೆತ್ತಲೆ ಪುರುಷ ಮತ್ತು ಮಹಿಳೆಯ ಸ್ಪಷ್ಟ ಚಿತ್ರಣ ಇರಲಿದೆ. ಈ ಯೋಜನೆಗೆ "ಬೀಕನ್ ಇನ್ ದಿ ಗ್ಯಾಲಕ್ಸಿ" (ಬಿಐಟಿಜಿ) ಎಂಬ ಹೆಸರನ್ನು ಇಡಲಾಗಿದ್ದು, ಈ ಯೋಜನೆಯ ಭಾಗವಾಗಿರುವ ಅಧ್ಯಯನದಲ್ಲಿ ನಾಸಾ ವಿಜ್ಞಾನಿಗಳು ಈ ಚಿತ್ರವನ್ನು ಪ್ರಕಟಿಸಿದ್ದಾರೆ. ಈ ಚಿತ್ರದ ಮೂಲಕ ಬಾಹ್ಯಾಕಾಶದಲ್ಲಿರುವ ಯಾವುದೇ ಬುದ್ಧಿವಂತ ಏಲಿಯನ್ಗಳಿಗೆ ಸಂದೇಶವನ್ನು ಕಳುಹಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ.
ಏಲಿಯನ್ಗಳಿಗಾಗಿ ಸಿದ್ಧವಾಗಿರುವ "ಆಹ್ವಾನ"ದಲ್ಲಿ ಸೌರವ್ಯೂಹದ ರೇಖಾಚಿತ್ರವ ಸಹ ಒಳಗೊಂಡಿರುತ್ತದೆ. ಇದಲ್ಲದೆ, ವಿಶ್ವ ನಕ್ಷೆ ಮತ್ತು ಭೂಮಿಯ ಸಂಯೋಜನೆ ಹಾಗೂ ಭೂಮಿಯ ಗುಣಲಕ್ಷಣಗಳ ಪಟ್ಟಿಯೊಂದಿಗೆ ಸಂದೇಶವನ್ನು ಕಳುಹಿಸಲಾದ ಗ್ರಹದ ಮಾಹಿತಿಯು ಸಹ ಆಹ್ವಾನದಲ್ಲಿ ಇರಲಿದೆ. ಯಾವುದೇ ಅನ್ಯಗ್ರಹ ಜೀವಿಗಳು ಸಂದೇಶಕ್ಕೆ ಪ್ರತಿಕ್ರಿಯಿಸಲು ಬಯಸಿದರೆ ನಿರ್ದಿಷ್ಟ ಆವರ್ತನದ ವಿವರಗಳನ್ನು ಸಹ ಆಹ್ವಾನದಲ್ಲಿ ಇರಲಿದೆ.
ಯೋಜನೆಯ ಮಾಹಿತಿಯು ಭೂಮಿಯನ್ನು ಹೆಚ್ಚು ವಿಶಿಷ್ಟವಾಗಿಸಲು ಸಹಾಯ ಮಾಡುತ್ತದೆ ಮತ್ತು ಸಂದೇಶ ಸ್ವೀಕರಿಸುವವರಿಗೆ ಭೂಮಿಯ ಮೇಲ್ಮೈಯನ್ನು ಸಮೀಪದಿಂದ ನೋಡಿದಂತೆ ಅರ್ಥಮಾಡಿಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಭೂಮಿಯು ಹೇಗಿದೆ ಎಂದು ತಿಳಿದ ನಂತರ, ಸಂದೇಶವನ್ನು ಸ್ವೀಕರಿಸುವವರು ಭೂಮಿಯ ಸಾಮಾನ್ಯ ಸಂಯೋಜನೆಯ ಬಗ್ಗೆ ಕುತೂಹಲ ಹೊಂದಿರುತ್ತಾರೆ ಎಂದು ನಾಸಾ ಭಾವಿಸಿದೆ. (ಏಜೆನ್ಸೀಸ್)