

ಮೈಸೂರು: ವಿಶ್ವ ವಿಖ್ಯಾತ ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ ಜಂಬೂ ಸವಾರಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅರಮನೆ ಸುತ್ತಲಿನ ರಸ್ತೆಗಳಲ್ಲಿ ರಾಜಪಥಕ್ಕೆ ಅನ್ವಯ ಆಗುವಂತೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಜಂಬೂ ಸವಾರಿ ಸಾಗುವ ರಸ್ತೆಯ ಅಕ್ಕ-ಪಕ್ಕದಲ್ಲಿರುವ ಪಾರಂಪರಿಕ ಕಟ್ಟಡಗಳು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಮೇಲೆ ನಿಂತು ವಿಜಯದಶಮಿ ಮೆರವಣಿಗೆ ವೀಕ್ಷಣೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಮುನ್ನೆಚ್ಛರಿಕಾ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಅರಮನೆ ಅಂಗಳದಲ್ಲಿ 25 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತಾ ಕಾರ್ಯಕ್ಕೆ ಪೌರಕಾರ್ಮಿಕರ ನಿಯೋಜನೆ ಮಾಡಲಾಗಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಸ್ಥಳೀಯ ಆಡಳಿತ ಮನವಿ ಮಾಡಿದೆ.
ಸಂಘ-ಸಂಸ್ಥೆಗಳಿಂದ ಕುಡಿಯುವ ನೀರು ಹಾಗೂ ಮಜ್ಜಿಗೆ ವಿತರಣೆಗೆ ಅವಕಾಶ ಮಾಡಿಕೊಡಲಾಗಿದೆ. ಒಟ್ಟಾರೆ ಪೂರ್ವಾನುಮತಿ ಪಡೆದವರಿಗೆ ಮಾತ್ರ ಅರಮನೆ ಒಳಗೆ ಪ್ರವೇಶ ಕಲ್ಪಿಸಲಾಗುತ್ತದೆ. (ದಿಗ್ವಿಜಯ ನ್ಯೂಸ್)