ವಂಚನೆ ಯತ್ನ ಕೇಸ್‌: ದರ್ಶನ್ ಸ್ನೇಹಕೂಟದ ಆರೋಪ-ಪ್ರತ್ಯಾರೋಪಗಳಿಗೆ ಮೂಕಪ್ರೇಕ್ಷಕರಾದ ಪೊಲೀಸರು!

Aruna Kumari
Published on

ಮೈಸೂರು: ನಟ ದರ್ಶನ್ ಸ್ನೇಹಿತರಿಗೆ ವಂಚನೆ ಯತ್ನ ಪ್ರಕರಣದಲ್ಲಿ ದರ್ಶನ್ ಸ್ನೇಹಕೂಟದ ಆರೋಪ-ಪ್ರತ್ಯಾರೋಪಗಳಿಗೆ ಪೊಲೀಸರು ಮೂಕಪ್ರೇಕ್ಷಕರಾದಂತಿದೆ. ಇಡೀ ಪ್ರಕರಣ ಕೇವಲ ಕೆಸರೆರಚಾಟಕ್ಕೆ ಸೀಮಿತವಾಗಿದ್ದು, ಪ್ರಕರಣಕ್ಕೆ ಸಂಭಂದಿಸಿದ ಯಾವುದೇ ಬಲವಾದ ಸಾಕ್ಷಿಯನ್ನು ಅರುಣಾ ಕುಮಾರಿಯಾಗಲಿ, ದರ್ಶನ್​ ಸ್ನೇಹಿತರಾಗಲಿ ಅಥವಾ ನಿರ್ಮಾಪಕ ಉಮಾಪತಿಯಾಗಲಿ ನೀಡಿಲ್ಲ. ಈ ಕಾರಣದಿಂದ ಈ ಪ್ರಕರಣ ತೆರೆಮರೆಗೆ ಸರಿಯುವ ಸಾಧ್ಯತೆ ಇದೆ.

ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಇದುವರೆಗೂ ತನಿಖೆ ಶುರು ಮಾಡದೆ ಸುಮ್ಮನಾಗಿದ್ದಾರೆ. ಒಂದು ವೇಳೆ ತನಿಖೆಗೆ ಯಾರಿಂದಲೂ ಸಹಕಾರ ಸಿಗದಿದ್ದರೆ ಬಿ ರಿಪೋರ್ಟ್ ಸಲ್ಲಿಸಿ, ಇಡೀ ಪ್ರಕರಣಕ್ಕೆ ತಿಲಾಂಜಲಿ ಹಾಡಲು ಚಿಂತನೆ ನಡೆದಿದೆ.

ಆರಂಭಿಕ ಹಂತದಲ್ಲಿ ಪ್ರಕರಣದ ಬಗ್ಗೆ ವಿಶೇಷ ಆಸಕ್ತಿ ತೋರಿದ್ದ ನಟ ದರ್ಶನ್ ಮತ್ತು ದೂರುದಾರ ಹರ್ಷ ಮೆಲಂಟಾ, ಇದುವರೆಗೂ ಪೂರಕ ದಾಖಲೆಗಳನ್ನು ಒದಗಿಸದೆ ಮೌನಕ್ಕೆ ಜಾರಿದ್ದಾರೆ. ಆರೋಪಿಗಳಾದ ಅರುಣಾಕುಮಾರಿ, ನಿರ್ಮಾಪಕ ಉಮಾಪತಿಗೌಡನಿಂದಲೂ ಹೇಳಿಕೆ ದಾಖಲಾಗಿದ್ದು, ವಿಚಾರಣೆ ಬಳಿಕವೂ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಈ ಕಾರಣದಿಂದಲೇ ಅರುಣಾಕುಮಾರಿಯನ್ನು ಸಿಆರ್‌ಪಿಸಿ 41/ಎ ಅಡಿಯಲ್ಲಿ ನೋಟಿಸ್ ಕೊಟ್ಟು ಬಿಟ್ಟು ಕಳುಹಿಸಲಾಗಿದೆ.

ಕಾನೂನಾತ್ಮಕವಾಗಿ ಕೇಸ್ ನಿಲ್ಲೋದಿಲ್ಲ ಅಂತ ಗೊತ್ತಾಗುತ್ತಿದ್ದಂತೆಯೇ ನಟ ದರ್ಶನ್ ಸುದ್ದಿಗೋಷ್ಠಿ ಕರೆದಿದ್ದಾರೆ ಎಂಬ ಚರ್ಚೆಗಳು ನಡೆದಿವೆ. ಇತ್ತ ಆರೋಪ- ಪ್ರತ್ಯಾರೋಪಗಳಿಗೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದಾರೆ. ನಿನ್ನೆ ಏಕಾಏಕಿ ದರ್ಶನ್-ಉಮಾಪತಿ "ಆತ್ಮೀಯತೆ" ಪ್ರದರ್ಶನ ಮಾಡಿದ್ದಾರೆ. ಅಲ್ಲದೆ, ನನಗೆ ಎಲ್ಲ ಸ್ನೇಹಿತರು ಕೂಡ ಮುಖ್ಯ ಎಂದಿದ್ದಾರೆ. ಹೀಗಾಗಿ ಗೊಂದಲದಲ್ಲಿರುವ ಪೊಲೀಸರು ಪ್ರಕರಣದ ತನಿಖೆಯನ್ನೇ ಆರಂಭಿಸದೆ ಸೈಲೆಂಟ್ ಆಗಿದ್ದಾರೆ.

ಒಂದು ವೇಳೆ ದರ್ಶನ್​ ಸ್ನೇಹಿತರು ರಾಜಿ ಸಂಧಾನಕ್ಕೆ ಬಂದರೆ ಬಿ ರಿಪೋರ್ಟ್ ಸಲ್ಲಿಸೋದು ಪೊಲೀಸರಿಗೆ ಅನಿವಾರ್ಯವಾಗಿದೆ. ಆದರೆ, ಅರುಣಾಕುಮಾರಿ ಯಾಕೆ ಹಣದ ವಂಚನೆಗೆ ಮುಂದಾಗಿದ್ದಳು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿ ಉಳಿದುಕೊಂಡಿದೆ. ಮುಂದಿನ ದಿನಗಳಲ್ಲಿ ಇದು ಹೊರಬರುತ್ತಾ ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net