

ನವದೆಹಲಿ: ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಬಿರು ಬಿಸಿಲಿನಿಂದ ನಿಮ್ಮ ಮುಖ ಟ್ಯಾನ್ ಆಗುತ್ತಿರುವುದನ್ನು ಹೇಗೆ ತಪ್ಪಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, ನಾನು ಯಾವುದೇ ಸನ್ ಸ್ಕ್ರೀನ್ ಬಳಸುವುದಿಲ್ಲ ಎಂದಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಪಾದಯಾತ್ರೆಯ ಬಿಡುವಿನ ಸಮಯದಲ್ಲಿ ರಾಹುಲ್ ಗಾಂಧಿ ಅವರು ಸ್ಥಳೀಯರ ಜೊತೆ ಸಂವಾದ ನಡೆಸಿದ್ದು, ಈ ವೇಳೆ ಟ್ಯಾನಿಂಗ್ ಬಗ್ಗೆ ಕೇಳಿಬಂದ ಪ್ರಶ್ನೆಗೆ ಅವರು ಉತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನನ್ನ ತಾಯಿ ನನಗೆ ಸನ್ಸ್ಕ್ರೀನ್ ಕಳುಹಿಸಿದ್ದಾರೆ. ಆದರೆ, ನಾನದನ್ನು ಬಳಸುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ರಾಹುಲ್ ಹೇಳಿದರು. ನೀವು ಯಾವುದೇ ಸನ್ಸ್ಕ್ರೀನ್ ಬಳಸುವುದಿಲ್ಲವಾ ಎಂದು ಅಚ್ಚರಿ ವ್ಯಕ್ತಪಡಿಸಿದ ಸ್ಥಳೀಯರು, ನಿಮ್ಮ ಮುಖವೇ ಒಂದು ಸನ್ಶೈನ್ ಎಂದು ರಾಹುಲ್ರನ್ನು ಹೊಗಳಿದರು.
ಇದೇ ಸಂದರ್ಭದಲ್ಲಿ ಯಾತ್ರೆಯ ಬಗ್ಗೆ ಮಾತನಾಡಿದ ರಾಹುಲ್, ಭಾರತ್ ಜೋಡೋ ಯಾತ್ರೆ ಒಂದು ಐತಿಹಾಸಿಕ ಕ್ಷಣ. ಈ ಯಾತ್ರೆ ಇಂದಿಗೆ ಮಾತ್ರವಲ್ಲ. ಈ ಯಾತ್ರೆ ನಮ್ಮ ಮುಂದಿನ ಪೀಳಿಗೆಗಾಗಿ ಎಂದರು.
ರಾಹುಲ್ ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಯಾತ್ರೆಗೆ ವಿರಾಮ ನೀಡಲಾಗಿತ್ತು. ರಾಹುಲ್ ಅವರು ಬಳ್ಳಾರಿಯಲ್ಲಿ ತಮ್ಮ ಮತ ಚಲಾವಣೆ ಮಾಡಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಶಶಿ ತರೂರ್ ಅವರು ಸ್ಪರ್ಧೆ ಮಾಡಿದ್ದಾರೆ.
24 ವರ್ಷಗಳ ನಂತರ ಮೊದಲ ಗಾಂಧಿಯೇತರ ಪಕ್ಷದ ಮುಖ್ಯಸ್ಥರಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ. (ಏಜೆನ್ಸೀಸ್)