ಮಹಿಳೆಯರ ಶವದ ಮಾಂಸವನ್ನು ಬೇಯಿಸಿ ತಿಂದಿದ್ದೀರಾ? ಆರೋಪಿ ಕೊಟ್ಟ ಪ್ರತಿಕ್ರಿಯೆ ನೋಡಿ ದಂಗಾದ ಅಧಿಕಾರಿಗಳು

Shafi
Published on

ತಿರುವನಂತಪುರ: ವಾಮಾಚಾರಕ್ಕಾಗಿ ಮಹಿಳೆಯರಿಬ್ಬರನ್ನು ಬಲಿ ಕೊಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಕಳೆದ ಶನಿವಾರ ನಡೆದ ತಪಾಸಣೆ ವೇಳೆ ತನಿಖಾ ತಂಡಕ್ಕೆ ಅನೇಕ ಸಂಗತಿಗಳು ಖಚಿತವಾಗಿದ್ದು, ಅವುಗಳಲ್ಲಿ ಮಾನವ ಶವದ ಮಾಂಸವನ್ನು ತಿಂದಿರುವುದು ಸಹ ಒಂದು.

ಇಷ್ಟು ದೊಡ್ಡ ಅಪರಾಧ ಎಸಗಿದ್ದರೂ ಪ್ರಕರಣದ ಪ್ರಮುಖ ಆರೋಪಿ ಶಫಿಗೆ ಮಾತ್ರ ಕಿಂಚಿತ್ತೂ ಪಾಪ ಪ್ರಜ್ಞೆ ಕಾಡದಿರುವುದು ಆತನ ವಿಕೃತ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಮಹಿಳೆಯರಿಬ್ಬರನ್ನು ಕೊಲೆ ಮಾಡಿ, ಶವದ ಮಾಂಸವನ್ನು ಬೇಯಿಸಿ, ತಿಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಕೊಲೆಯಾದ ಮಹಿಳೆಯರ ಶವದ ಮಾಂಸವನ್ನು ಬೇಯಿಸಿ ತಿಂದಿದ್ದೀರಾ? ಎಂದು ಆರೋಪಿ ಶಫಿಯನ್ನು ತನಿಖಾಧಿಕಾರಿಗಳು ಪ್ರಶ್ನಿಸಿದಾಗ, ಆತನಿಂದ ಬಂದ ಪ್ರತಿಕ್ರಿಯೆ ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ. ಪ್ರಶ್ನೆಗೆ ಮಾತಿನಲ್ಲಿ ಉತ್ತರ ನೀಡುವ ಬದಲು ಅಧಿಕಾರಿಗಳನ್ನು ನೋಡಿ ಸಣ್ಣದಾಗಿ ನಕ್ಕಿದ್ದಾನೆ. ಆತನ ಮುಖದಲ್ಲಿ ಸ್ವಲ್ಪವೂ ಪ್ರಾಯಶ್ಚಿತ ಎಂಬುದು ಇರಲಿಲ್ಲ.

ನರಬಲಿ ಸೇರಿದಂತೆ ಹಲವು ವಿಚಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ತನಿಖಾ ತಂಡವು ಆರೋಪಿ ಶಫಿಯನ್ನು ಹಗಲು-ರಾತ್ರಿ ವಿಚಾರಣೆ ನಡೆಸುತ್ತಿದೆ. ಈತ ಈ ಹಿಂದೆ ಶವಾಗಾರದಲ್ಲಿ ಸಹಾಯಕನಾಗಿ ಹಾಗೂ ಕಸಾಯಿ ಖಾನೆ ಕೆಲಸ ಮಾಡಿಕೊಂಡಿದ್ದ. ಇದೇ ಅನುಭವ ಮಾನವ ದೇಹವನ್ನು ಕತ್ತರಿಸಲು ಆತನಿಗೆ ಸಹಾಯ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವಾಮಾಚಾರಕ್ಕೆ ಬಲಿಯಾದ ಮಹಿಳೆಯರಿಬ್ಬರನ್ನು ಪದ್ಮಾ ಮತ್ತು ರೋಸ್ಲಿ ಎಂದು ಗುರುತಿಸಲಾಗಿದೆ. ದಿಢೀರ್​ ಶ್ರೀಮಂತರಾಗುವ ದುರಾಸೆಯಿಂದ ಪ್ರಮುಖ ಆರೋಪಿ ಶಫಿ ಜೊತೆ ಸೇರಿಕೊಂಡು ಆರೋಪಿ ದಂಪತಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ದುಷ್ಕೃತ್ಯ ಎಸಗಿದ್ದಾರೆ. ಮೂವರು ಆರೋಪಿಗಳನ್ನು ಕೇರಳ ಪೊಲೀಸರು ಮಂಗಳವಾರ (ಅ.11) ಬಂಧಿಸಿದರು. ನರಬಲಿ ಮಾಡಿದರೆ ಅಪಾರ ಸಂಪತ್ತು ಪಡೆಯಬಹುದು ಎಂಬ ಶಫಿಯ ಮಾತನ್ನು ನಂಬಿದ ಆರೋಪಿ ದಂಪತಿ ಆತನಿಗೆ ಒಂದೂವರೆ ಲಕ್ಷ ರೂಪಾಯಿ ಶುಲ್ಕವನ್ನು ಪಾವತಿಸಿದ್ದರು. ಹಣಕಾಸಿನ ತೊಂದರೆಯಿಂದ ಹೊರಬರಬಂದು, ಆರ್ಥಿಕ ಏಳಿಗೆ ಸಾಧಿಸಬಹುದೆಂಬ ಆಸೆಗೆ ಬಿದ್ದು ದಂಪತಿ ಈ ಕೃತ್ಯ ಎಸಗಿದ್ದು, ಪೊಲೀಸ್​ ತನಿಖೆಯಲ್ಲಿ ಭಯಾನಕ ಸಂಗತಿಗಳು ಹೊರಬರುತ್ತಿವೆ. ಅಂದಹಾಗೆ ಈ ಘಟನೆ ಪತ್ತನಂತಿಟ್ಟ ಜಿಲ್ಲೆಯ ಎಳಂತೂರಿನಲ್ಲಿ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net