

ರಂಗಾರೆಡ್ಡಿ: ಮೊಬೈಲ್ನಲ್ಲಿ ಗೇಮ್ ಆಡಬೇಡ ಎಂದು ತಂದೆ ಗದರಿದ್ದಕ್ಕೆ ಮನನೊಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳೀಯರ ಪ್ರಕಾರ ಬಾಲಾಪುರ್ ಮೂಲದ ವೇಲದುರ್ತಿ ಮನೋಹರಚಾರಿ ಮತ್ತು ಲಾವಣ್ಯ ದಂಪತಿ ಮೀರ್ಪೇಟ್ನ ಸರ್ವೋದಯ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ನೆಲೆಸಿದ್ದರು. ದಂಪತಿಗೆ ಕೌಶಿಕಿ (17) ಮತ್ತು ಅನುಶ್ರೀ ಎಂಬ ಇಬ್ಬರು ಹೆಣ್ಣ ಮಕ್ಕಳು ಮತ್ತು ರೇವಂತ್ ಹೆಸರಿನ ಒಬ್ಬ ಮಗನಿದ್ದಾನೆ.
ಹಿರಿಯ ಮಗಳು ಕೌಶಿಕಿ ದ್ವಿತೀಯ ಪಿಯು ವಿದ್ಯಾರ್ಥಿನಿ ಆಗಿದ್ದಳು. ಮೊಬೈಲ್ ಗೀಳಿಗೆ ಬಿದ್ದಿದ್ದ ಕೌಶಿಕಿ ಅಪ್ಪನ ಮೊಬೈಲ್ ತೆಗೆದುಕೊಂಡು ಯಾವಾಗಲೂ ಗೇಮ್ ಆಡುತ್ತಿದ್ದಳು. ಹೀಗೆ ಗೇಮ್ ಆಡುತ್ತಿರುವಾಗ ಭಾನುವಾರ ರಾತ್ರಿ ಕೌಶಿಕಿ ತಂದೆ ಆಕೆಯನ್ನು ಬೈದು ಮೊಬೈಲ್ ಕಿತ್ತುಕೊಂಡಿದ್ದರು.
ಅಪ್ಪ ಬೈದಿದ್ದರಿಂದ ಬೇಸರಗೊಂಡಿದ್ದ ಕೌಶಿಕಿ ಅದೇ ದಿನ ರಾತ್ರಿ ಮಲಗುವುದಾಗಿ ಹೇಳಿ ಬೆಡ್ರೂಮ್ಗೆ ತೆರಳಿ ಲಾಕ್ ಹಾಕಿಕೊಂಡಿದ್ದಾಳೆ. ಅದೇ ಕೋಣೆಯಲ್ಲಿ ಆಕೆಯ ಸಹೋದರಿ ಕೂಡ ಮಲಗಿದ್ದಳು. ಇದರ ನಡುವೆ ತಾಯಿ ಕಿಟಕಿ ಬಾಗಿಲು ಬಡಿದಿದ್ದಾಳೆ. ಇದರಿಂದ ಎಚ್ಚರಗೊಂಡ ಸಹೋದರಿ ಎದ್ದು ನೋಡಿದಾಗ ಅಕ್ಕ ತನ್ನ ದುಪ್ಪಟ್ಟದಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಜೋರಾಗಿ ಕಿರುಚುಕೊಂಡಿದ್ದಾಳೆ.
ತಕ್ಷಣ ಕೌಶಿಕಿಯನ್ನು ಸ್ಥಳೀಯರ ಸಹಾಯದಿಂದ ಒಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಕೌಶಿಕಿ ಕೊನೆಯುಸಿರೆಳೆದಿದ್ದಾಳೆ. ಸದ್ಯ ಮೀರ್ಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್)