

ಕೊಚ್ಚಿ: ಮಲಯಾಳಂ ಬ್ಯೂಟಿ ಮೀರಾ ಜಾಸ್ಮಿನ್ ಯಾರಿಗೆ ತಾನೇ ಗೊತ್ತಿಲ್ಲ. ಒಂದು ಕಾಲದಲ್ಲಿ ಬಹುಭಾಷೆಯ, ಬಹುಬೇಡಿಕೆಯ ನಟಿಯಾಗಿದ್ದ ಜಾಸ್ಮಿನ್, ಕಾಲಾನಂತರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾದಿಂದ ಕಣ್ಮರೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಉಪಸ್ಥಿತಿ ಇರಲಿಲ್ಲ. ಜಾಸ್ಮಿನ್ ಎಲ್ಲಿ ಹೋದರು ಎಂದು ಬಹುತೇಕರು ಹುಡುಕಾಟ ನಡೆಸುತ್ತಿದ್ದರು. ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಗಂಡನಿಂದ ದೂರಾಗಿರುವ ಜಾಸ್ಮಿನ್ ಇದೀಗ ಮಲಯಾಳಂ ಸಿನಿ ರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಾಮಾಜಿಕ ಜಲಾತಾಣದಿಂದ ದೂರವಾಗಿದ್ದ ಜಾಸ್ಮಿನ್ ಕೆಲ ತಿಂಗಳ ಹಿಂದಷ್ಟೇ ಇನ್ಸ್ಟಾಗ್ರಾಂಗೆ ಎಂಟ್ರಿ ನೀಡಿದ್ದಾರೆ.
ಇದೇ ವರ್ಷ ಜನವರಿ 20ರಂದು ಇನ್ಸ್ಟಾಗ್ರಾಂ ಖಾತೆಯನ್ನು ತೆರೆದಿರುವ ಮೀರಾ ಜಾಸ್ಮಿನ್, ಅಂದಿನಿಂದ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜಾಸ್ಮಿನ್ ಮತ್ತೆ ಬಣ್ಣದ ಲೋಕಕ್ಕೆ ಮರಳಿರುವುದು ಅವರ ಅಭಿಮಾನಿಗಳಿಗೂ ಖುಷಿಯಾಗಿದೆ. ಜಾಸ್ಮಿನ್ ಅವರು ಜಾಲತಾಣಕ್ಕೆ ಎಂಟ್ರಿ ಕೊಟ್ಟ ದಿನದಿಂದಲೂ ನಿರಂತರವಾಗಿ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅದರಲ್ಲೂ ಇದುವರೆಗೂ ಕಾಣಿಸಿಕೊಳ್ಳದ ಸಖತ್ ಬೋಲ್ಡ್ ಅವತಾರದಲ್ಲಿ ಜಾಸ್ಮಿನ್ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದು ಫೋಟೋದಲ್ಲಿ ಹಳದಿ ಟಾಪ್ ಆ್ಯಂಡ್ ಸ್ಕರ್ಟ್ ಧರಿಸಿ ಅರೆ ನಗ್ನ ದರ್ಶನ ನೀಡುವ ಮೂಲಕ ಆತ್ಮದ ಸೂರ್ಯನ ಕಿರಣ ಎಂಬ ಅಡಿಬರಹ ನೀಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಎದೆ ಸೀಳು ಕಾಣುವಂತೆ ಬಿಳಿ ಬಣ್ಣದ ಟಾಪ್ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದು, ನಿಮ್ಮಲ್ಲಿ ಹೆಚ್ಚು ಮತ್ತು ಅವರಲ್ಲಿ ಕಡಿಮೆಯಾಗಿರಿ ಎಂದು ಬರೆದುಕೊಂಡಿದ್ದಾರೆ. ಎರಡು ಫೋಟೋಗಳಿಗೂ ಲಕ್ಷಾಂತರ ಲೈಕ್ಸ್ ಬಂದಿವೆ. ಜಾಸ್ಮಿನ್ ಮೈಮಾಟಕ್ಕೆ ಸೋತು, ಸಾವಿರಾರು ಅಭಿಮಾನಿಗಳು ಕಾಮೆಂಟ್ ಮೂಲಕ ಅವರ ಸೌಂದರ್ಯವನ್ನು ಬಣ್ಣಿಸುತ್ತಿದ್ದಾರೆ.
ಅಂದಹಾಗೆ ಜಾಸ್ಮಿನ್ ಅವರು 2014ರಲ್ಲಿ ಅನಿಲ್ ಜಾನ್ ಟಿಟನ್ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಪತಿ ದುಬೈನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲೇ ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡರು. ಮದುವೆಯಾಗಿದ್ದರೂ ಮಾನಸಿಕ ಸಮಸ್ಯೆಯಿಂದ ಜಾಸ್ಮಿನ್ ತಮ್ಮ ಪತಿಯಿಂದ ಬೇರೆಯಾಗಿದ್ದಾರೆ. ಮತ್ತೆ ಸಿನಿಮಾ ಕಡೆ ಒಲವು ತೋರಿಸಿರುವ ಜಾಸ್ಮಿನ್ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ಅಭಿನಯದ ಮಕ್ಕಳ್ ಸಿನಿಮಾ ಬಿಡುಗಡೆಯಾಯಿತು.
ಜಾಸ್ಮಿನ್ ಕನ್ನಡಿಗರಿಗೂ ಚಿರಪರಿಚಿತರು. ಏಕೆಂದರೆ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ದಿವಂಗತ ನಟ ಪುನೀತ್ ಜತೆ ಮೌರ್ಯ ಮತ್ತು ಅರಸು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಶಿವಣ್ಣನ ಜತೆ ದೇವರ ಕೊಟ್ಟ ತಂಗಿ ಚಿತ್ರ ಮತ್ತು ರವಿಚಂದ್ರನ್ ಜತೆ ಹೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನದಲ್ಲೂ ಜಾಸ್ಮಿನ್ ಮನೆ ಮಾಡಿದ್ದಾರೆ. (ಏಜೆನ್ಸೀಸ್)