ಮದ್ದೂರಲ್ಲಿ ಫ್ಲೈಓವರ್​ ಪಿಲ್ಲರ್​ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟಿಪ್ಪರ್​: ಹೊರಬರಲಾಗದೇ ಚಾಲಕ ಸಜೀವ ದಹನ

Tipper
Published on

ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ಫ್ಲೈ ಓವರ್​ನ ಪಿಲ್ಲರ್​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಚಾಲಕನ ಸಮೇತ ಟಿಪ್ಪರ್​ ಲಾರಿ ಸುಟ್ಟು ಕರಕಲಾಗಿರುವ ಘಟನೆ ಮದ್ದೂರು ಪಟ್ಟಣದಲ್ಲಿ ಇಂದು ಬೆಳಗ್ಗಿನ ಜಾವದಲ್ಲಿ ನಡೆದಿದೆ.

ಮದ್ದೂರಿನ ಬೆಂಗಳೂರು-ಮೈಸೂರು ಹೆದ್ದಾರಿಯ ಎಲ್.ಐ.ಸಿ ಕಛೇರಿಯ ಮುಂಭಾಗವೇ ಘಟನೆ ನಡೆದಿದೆ. ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ಟಿಪ್ಪರ್​ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಫ್ಲೈ ಓವರ್​ ಪಿಲ್ಲರ್​ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಡಿಕ್ಕಿ ರಭಸಕ್ಕೆ ಟಿಪ್ಪರ್ ನಜ್ಜುಗುಜ್ಜಾದ ಹಿನ್ನಲೆಯಲ್ಲಿ ಚಾಲಕ ವಾಹನದೊಳಗೆ ಸಿಲುಕಿ ಹೊರಬರಲಾಗದೇ ಟಿಪ್ಪರ್​ನಲ್ಲೇ ಸಜೀವ ದಹನವಾಗಿದ್ದಾನೆ. ಮೃತ ಚಾಲಕನನ್ನು ಹಾಸನ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಚಾಲಕನ ಶವವನ್ನು ಹೊರ ತೆಗೆದಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಟಿಪ್ಪರ್ ಪಕ್ಕಕ್ಕೆ ಸರಿಸಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net