

ನವದೆಹಲಿ: ಯೂಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ರಷ್ಯಾಗೆ ಬುಧವಾರ ಆದೇಶಿಸಿದೆ. ರಷ್ಯಾ ತನ್ನ ಪಡೆಗಳನ್ನು ಬಳಸುತ್ತಿರುವ ರೀತಿ ನಿಜಕ್ಕೂ ತೀವ್ರ ಕಳವಳಕಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಫೆಬ್ರವರಿ 24 ರಂದು ಯೂಕ್ರೇನ್ ಭೂಪ್ರದೇಶದಲ್ಲಿ ಪ್ರಾರಂಭವಾದ ಮಿಲಿಟರಿ ಕಾರ್ಯಾಚರಣೆಯನ್ನು ರಷ್ಯಾ ಒಕ್ಕೂಟವು ತಕ್ಷಣವೇ ಸ್ಥಗಿತಗೊಳಿಸಬೇಕು. ಈ ಪ್ರಕರಣದ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ ಎಂದು ಐಸಿಜೆ ಅಧ್ಯಕ್ಷರಾದ ಜೋನ್ ಡೊನೊಘ್ ತಿಳಿಸಿದರು. ಅಂತಾರಾಷ್ಟ್ರೀಯ ಕಾನೂನಿನಲ್ಲಿ ಬಹಳ ಗಂಭೀರವಾದ ಸಮಸ್ಯೆಗಳನ್ನು ಹುಟ್ಟುಹಾಕುವ ರಷ್ಯಾದ ಒಕ್ಕೂಟದ ಸೇನಾ ಬಳಕೆಯ ಬಗ್ಗೆ ನ್ಯಾಯಾಲಯವು ತೀವ್ರ ಕಾಳಜಿ ವಹಿಸುತ್ತದೆ ಎಂದು ನ್ಯಾಯಮೂರ್ತಿ ಡೊನೊಘ್ ಹೇಗ್‌ನಲ್ಲಿ ನಡೆದ ವಿಚಾರಣೆ ವೇಳೆ ಹೇಳಿದರು.
ದಾಳಿಯನ್ನು ಮುಂದುವರಿಸಿರುವ ರಷ್ಯಾ ವಿರುದ್ಧ ಯೂಕ್ರೇನ್ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿರುವ ನ್ಯಾಯಾಲಯ ರಷ್ಯಾವು ತನ್ನ ಆಕ್ರಮಣವನ್ನು ತಕ್ಷಣ ಅಮಾನತಿನಲ್ಲಿ ಇಡುವಂತೆ ಆದೇಶಿಸಿದೆ.
ಐಸಿಜೆಯಲ್ಲಿರುವ ಭಾರತೀಯ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ರಷ್ಯಾ ವಿರುದ್ಧ ವೋಟ್ ಮಾಡಿದ್ದಾರೆ. ಭಾರತ ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ಭಂಡಾರಿ ಅವರು ಐಸಿಜೆಗೆ ನಾಮ ನಿರ್ದೇಶಿತಗೊಂಡಿದ್ದಾರೆ. ಯೂಕ್ರೇನ್-ರಷ್ಯಾ ಯುದ್ಧ ವಿಚಾರದಲ್ಲಿ ಸದ್ಯ ಭಾರತ ತಟಸ್ಥ ನೀತಿಯನ್ನು ಅನುಸರಿಸಿದೆ. ಆದರೆ, ಭಾರತೀಯ ನ್ಯಾಯಮೂರ್ತಿಗಳು ರಷ್ಯಾ ವಿರುದ್ಧ ವೋಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ನ್ಯಾಯಮೂರ್ತಿ ಭಂಡಾರಿ ಅವರು ರಷ್ಯಾ-ಯೂಕ್ರೇನ್ ವಿಷಯದಲ್ಲಿ ಸ್ವತಂತ್ರ ಕ್ರಮವನ್ನು ಹೊಂದಿದ್ದಾರೆ. ರಷ್ಯಾದ ವಿರುದ್ಧ ಮತ ಚಲಾಯಿಸಿದ್ದು, ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಅಧಿಕೃತ ಸ್ಥಾನಕ್ಕಿಂತ ಭಿನ್ನವಾಗಿದೆ. ಇದು ಭಾರತದ ಅಭಿಪ್ರಾಯವಾಗಿರುವುದಿಲ್ಲ. ಈ ಹಿಂದೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಮಂಡಿಸಿದಾಗ ರಷ್ಯಾ ಮತದಾನಿಂದ ಹೊರಗುಳಿದಿತ್ತು. ಇದಾದ ಬಳಿಕ ರಷ್ಯಾ ಭಾರತಕ್ಕೆ ಧನ್ಯವಾದ ತಿಳಿಸಿತ್ತು. ತಟಸ್ಥ ನಿಲುವು ಹೊಂದಿರುವ ಭಾರತ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಂಧಾನ ಒಂದೇ ದಾರಿ ಎಂಬ ಮಂತ್ರವನ್ನು ಜಪಿಸುತ್ತಿದೆ.