

ಕರ್ನೂಲ್: ಹಣ ಡ್ರಾ ಮಾಡಲೆಂದು ಎಟಿಎಂಗೆ ಹೋದ ವ್ಯಕ್ತಿಯೊಬ್ಬ ಎಟಿಎಂ ಕಾರ್ಡ್ ಹಾಕಿ 1000 ರೂಪಾಯಿ ನಮೂದಿಸಿದಾಗ 10 ಸಾವಿರ ರೂ. ಹಣ ಡ್ರಾ ಆದ ಅಚ್ಚರಿಯ ಘಟನೆ ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಈ ರೀತಿ ಆದಾಗ ಖುಷಿಯಿಂದ ಹಣ ತೆಗೆದುಕೊಂಡು ಹೋಗುವವರೇ ಹೆಚ್ಚು. ಅದರಲ್ಲೂ ಅದೇ ಸಮಯದಲ್ಲಿ ಎಟಿಎಂ ಸೆಕ್ಯುರಿಟಿ ಗಾರ್ಡ್ ಇಲ್ಲದಿದ್ದರೆ ಲಾಡು ಬಂದು ಬಾಯಿಗೆ ಬಿದ್ದಂತೆ. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಏನು ನಡೆಯಿತು ಎಂದು ತಿಳಿದರೆ ನಿಜಕ್ಕೂ ಆ ವ್ಯಕ್ತಿಯ ಬಗ್ಗೆ ಹೆಮ್ಮೆ ಪಡ್ತೀರಾ.
ಘಟನೆಯ ವಿವರಣೆಗೆ ಬರುವುದಾದರೆ, ಚಾಂದ್ಭಾಷಾ ಎಂಬುವರು ಶನಿವಾರ ರಾತ್ರಿ ಹಣ ಡ್ರಾ ಮಾಡಲೆಂದು ಸ್ಥಳೀಯ ಎಸ್ಬಿಐ ಎಟಿಎಂಗೆ ತೆರಳುತ್ತಾರೆ. ಕಾರ್ಡನ್ನು ಎಟಿಎಂ ಒಳಗೆ ಹಾಕಿ 1000 ರೂ. ಹಣ ಡ್ರಾ ಮಾಡಲು ಮುಂದಾಗುತ್ತಾನೆ. ಆದರೆ, ಸರ್ಪ್ರೈಸ್ ಎನ್ನುವಂತೆ 10000 ಸಾವಿರ ಹಣ ಎಟಿಎಂ ಯಂತ್ರದಡಿಯಲ್ಲಿ ಇರುತ್ತದೆ. ಆದಾಗ್ಯೂ ಒಮ್ಮೆ ಪರಿಶೀಲಿಸಿದಾಗ ತನ್ನ ಖಾತೆಯಲ್ಲಿ ಕೇವಲ 1 ಸಾವಿರ ರೂ. ಡ್ರಾ ಆಗಿರುವುದು ಖಚಿತವಾಗುತ್ತದೆ.
ಎಟಿಎಂ ಸೆಕ್ಯುರಿಟಿ ಅನುಪಸ್ಥಿತಿಯಲ್ಲಿ ಅಷ್ಟೂ ಹಣವನ್ನು ತೆಗೆದುಕೊಳ್ಳುವ ಚಾಂದ್ಭಾಷಾ ಸೋಮವಾರ ಬ್ಯಾಂಕ್ ಅಧಿಕಾರಿಗಳನ್ನು ಭೇಟಿಯಾಗುತ್ತಾರೆ. ಬಳಿಕ ಪರಿಶೀಲನೆ ನಡೆಸುವ ಅಧಿಕಾರಿಗಳು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡುತ್ತಾರೆ. ಅಲ್ಲದೆ, ಪ್ರಾಮಾಣಿಕವಾಗಿ ಹಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದ ಚಾಂದ್ಭಾಷನಿಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. (ಏಜೆನ್ಸೀಸ್)