ಎಸಿಪಿಗೆ ಕರೆ ಮಾಡಿ ಚಿಕನ್​ ಆರ್ಡರ್​ ಮಾಡಿದ ಎಎಸ್​ಐ! ಮುಂದೇನಾಯ್ತು ನೀವೇ ನೋಡಿ...

Chicken Order
Published on

ಕೋಯಿಕ್ಕೊಡ್​: ಒಂದೇ ಹೆಸರಿನಲ್ಲಿ ಎರಡು ಫೋನ್​ ನಂಬರ್​ ಸೇವ್​ ಮಾಡಿಟ್ಟುಕೊಂಡರೆ, ಕೆಲವೊಮ್ಮೆ ಹೇಗೆ ಎಡವಟ್ಟು ಆಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​​ ಮತ್ತು ಸಹಾಯಕ ಪೊಲೀಸ್​ ಆಯುಕ್ತರ ನಡುವೆ ನಡೆದ ಫೋನ್​ ಸಂಭಾಷಣೆ ಇದಾಗಿದ್ದು, ಅದನ್ನು ಕೇಳಿದರೆ ನಿಮ್ಮ ಮುಖದಲ್ಲಿ ನಗು ಅರಳಬಹುದು.

ವಿವರಣೆಗೆ ಬರುವುದಾದರೆ, ಎಆರ್​ ಕ್ಯಾಂಪ್​ ಎಎಸ್​ಐ ಬಾಲರಾಜ್​ ಎಂಬುವರು ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಫೋನ್​ ಮೂಲಕ ಚಿಕನ್​ ಶಾವೈ ಮತ್ತು ಖುಬ್ಜ್​ (ಅರೇಬಿಕ್​ ಪಿಟಾ ಬ್ರೆಡ್​) ಅನ್ನು ಬುಕ್​ ಮಾಡುತ್ತಾರೆ. ಬುಕ್​ ಮಾಡುವಾಗ ತಪ್ಪಾದ ನಂಬರ್​ ನಮೂದಿಸಿ ಕರೆ ಮಾಡುತ್ತಾರೆ. ಆ ಕರೆ ಫೆರೋಕ್​ ನಗರದ ಎಸಿಪಿ ಸಿದ್ದಿಖ್​ ಅವರಿಗೆ ಹೋಗಿದೆ.

ಕರೇ ಸ್ವೀಕರಿಸಿದ ಬೆನ್ನಲ್ಲೇ ಬಾಲರಾಜ್ ಚಿಕನ್​ ಶಾವೈ ಮತ್ತು ಖುಬ್ಜ್​ ಆರ್ಡರ್​ ಮಾಡಿದ್ದಾರೆ. ಬಳಿಕ ಆ ಕಡೆಯಿಂದ ಮಾತನಾಡಿದ ಎಸಿಪಿ, ನಾನು ಎಸಿಪಿ ಮಾತನಾಡುತ್ತಿರುವುದು ಎಂದಿದ್ದಾರೆ.​ ಇದಾದ ಬಳಿಕ ತನ್ನ ಎಡವಟ್ಟಿನ ಅರಿವಾಗಿ ತಕ್ಷಣವೇ ಬಾಲರಾಜ್​ ಎಸಿಪಿ ಬಳಿ ಕ್ಷಮೆಯಾಚಿಸಿದ್ದಾರೆ. ಇದಕ್ಕೆ ಉತ್ತರಿಸಿದ ಎಸಿಪಿ, ಇಂಥಹ ತಪ್ಪುಗಳಾಗುವುದು ಸಹಜ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡ. ಕೂಲ್​ ಆಗಿಯೇ ತೆಗೆದುಕೋ ಎಂದಿದ್ದಾರೆ.

ಇದಕ್ಕೂ ಮುನ್ನ ಚಾಲಿಯಮ್ ಕ್ಯೂಆರ್‌ಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಲರಾಜ್ ರಾತ್ರಿ 8 ಗಂಟೆ ಸುಮಾರಿಗೆ ತಮ್ಮ ಕರ್ತವ್ಯವವನ್ನು ಮುಗಿಸಿ ಎಸಿಪಿ ಸಿದ್ದಿಖ್​ಗೆ ಕರೆ ಮಾಡಿದ್ದಾರೆ. ಆಗಿದ್ದೇನೆಂದರೆ, ಬಾಲರಾಜ್​ ಮೀನಚಂಡ ಬೈಪಾಸ್​ನಲ್ಲಿರುವ ಸಿದ್ದಿಖ್​ ಹೆಸರಿನ ಹೋಟೆಲ್​ ಕರೆ ಮಾಡಲು ಹೋಗಿ ಸಿದ್ದಿಖ್​ ಹೆಸರಿನ ಎಸಿಪಿ ಅವರಿಗೆ ಕರೆ ಮಾಡಿದ್ದಾರೆ.

ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net