ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ: ಸರ್ಕಾರಿ ಶಾಲೆ ಟಿಸಿ ಪಡೆದು ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ ತಂದೆ

Egg
Published on

ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇದರ ನಡುವೆ ಕೊಪ್ಪಳದ ವ್ಯಕ್ತಿಯೊಬ್ಬರು ಮೊಟ್ಟೆ ಕೊಡುವುದನ್ನು ವಿರೋಧಿಸಿ ತಮ್ಮ ಮಗನ ವರ್ಗಾವಣೆ ಪತ್ರ ಪಡೆದು ಶಾಲೆಯಿಂದ ಹೊರ ಕರೆತಂದಿದ್ದಾರೆ.

ಕೊಪ್ಪಳದ ವೀರಣ್ಣ ಕೋರ್ಲಹಳ್ಳಿ ಎಂಬುವರು ತಮ್ಮ ಮಗನನ್ನು ಸರ್ಕಾರಿ ಶಾಲೆ ಬಿಡಿಸಿದ್ದಾರೆ. ವೀರಣ್ಣ ಅವರು ಅಖಿಲ ಭಾರತ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷರು. ಅವರ ಮಗ ಶರಣಬಸವಕಿರಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ವಿದ್ಯಾರ್ಥಿಯಾಗಿದ್ದ.

ಇದೀಗ ಸರ್ಕಾರಿ ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವುದು ನನ್ನ ಧರ್ಮಕ್ಕೆ ವಿರುದ್ಧವಾಗಿದೆ ಎಂದು ವೀರಣ್ಣ ಹೇಳಿದ್ದಾರೆ. ಒಂದೆರಡು ದಿನ ನನ್ನ ಮಗ ಮೊಟ್ಟೆ ತಿನ್ನದೆ ಇರಬಹುದು. ಆದರೆ, ಬೇರೆ ಮಕ್ಕಳು ತಿನ್ನುವುದನ್ನು ನೋಡಿ ನನ್ನ‌ ಮಗನೂ ತಿನ್ನಬಹುದು. ಇದೇ ಕಾರಣಕ್ಕಾಗಿ ಸರ್ಕಾರಿ ಶಾಲೆ ಬಿಡಿಸಿದ್ದೇನೆಂದು ಸಮರ್ಥನೆ ನೀಡಿದ್ದಾರೆ.

ಮಗನ ವರ್ಗಾವಣೆ ಪತ್ರ ಪಡೆದ ವಿಚಾರವನ್ನು ವೀರಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್​ ಆಗಿದೆ. ವೀರಣ್ಣರ ನಡೆಗೆ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net