

ಬೆಂಗಳೂರು: ಕೊನೆಗೂ ಏಪ್ರಿಲ್ 15 ಬಂದೇ ಬಿಟ್ಟಿತು. 11 ಗಂಟೆ 10 ನಿಮಿಷವು ಆಗಿಹೋಯಿತು. ಹೇಳಿದಂತೆಯೇ ವಿಕ್ರಾಂತ್ ರೋಣ ಚಿತ್ರತಂಡ ಸಪ್ರೈಸ್ ನೀಡುವ ಮೂಲಕ ಜನರ ಕಾಯುವಿಕೆಗೆ ತೆರೆ ಎಳೆದೇ ಬಿಟ್ಟಿದೆ. ಇದರೊಂದಿಗೆ ಆಗಷ್ಟ್ 19ನ್ನು ಎಲ್ಲರೂ ಎದುರು ನೋಡುವಂತೆ ಚಿತ್ರತಂಡ ಮಾಡಿದೆ.
ಹೌದು. ಆಗಸ್ಟ್ 19ಕ್ಕೆ ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯಾಗಲಿದೆ. ಪಂಚ ಭಾಷೆ ಸೇರಿ ವಿಶ್ವದಾದ್ಯಂತ ಏಕಕಾಲದಲ್ಲಿ ವಿಕ್ರಾಂತ್ ರೋಣ ಚಿತ್ರ ತೆರೆಗೆ ಅಪ್ಪಳಿಸಲಿದೆ.
ಈ ಮೂಲಕ ಅಭಿಮಾನಿಗಳ ಇಷ್ಟು ದಿನದ ಕಾಯುವಿಕೆಗೆ ಚಿತ್ರತಂಡ ವಿರಾಮ ಹೇಳಿದ್ದು, ಮುಂದೆ ಚಿತ್ರದ ಅದ್ಧೂರಿ ಸ್ವಾಗತಕ್ಕೆ ದಿನಗಣನೆ ಎಣಿಸುವಂತೆ ಮಾಡಿದೆ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ವಿಕ್ರಾಂತ್ ರೋಣ ಮತ್ತು ಕಿಚ್ಚ ಸುದೀಪ್ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ಆಗಸ್ಟ್ 19 ಎಷ್ಟು ಬೇಗ ಬರುತ್ತದೋ ಎಂದು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ವರ್ಷ ಕೋಟಿಗೊಬ್ಬ ಮತ್ತು ವಿಕ್ರಾಂತ್ ರೋಣ ಚಿತ್ರಗಳು ತೆರೆ ಕಾಣಲಿದ್ದು, ಸುದೀಪ್ ಅಭಿಮಾನಿಗಳ ಪಾಲಿಗೆ ಹಬ್ಬವಾಗಿದೆ. ಇಷ್ಟೇ ಅಲ್ಲದೆ, ವಿಕ್ರಾಂತ್ ರೋಣ ಚಿತ್ರ ತಂಡದ ಪ್ರಚಾರ ಕಾರ್ಯ ಹೇಗಿರುತ್ತದೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.
‘ಕಿಚ್ಚ’ ಸುದೀಪ್ ನಟನೆಯ ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾ ಶೂಟಿಂಗ್ ಹಂತದಿಂದಲೂ ಸುದ್ದಿಯಲ್ಲಿದೆ. ಅಷ್ಟೇ ಯಾಕೆ, ಬಹುಭಾಷೆಯಲ್ಲಿ ಸಿದ್ಧವಾಗುತ್ತಿರುವ ‘ರೋಣ’, ಇತ್ತೀಚೆಗೆ ದುಬೈನ ಬುರ್ಜ್ ಖಲೀಫಾ ಮೇಲೆಯೂ ಶೀರ್ಷಿಕೆ ಅನಾವರಣ ಮಾಡಿ ಸ್ಯಾಂಡಲ್ವುಡ್ನಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಬರೆದಿದೆ.