ಹೇಗಿದೆ ಕೆಜಿಎಫ್​ ಚಾಪ್ಟರ್​ 2? ಸಿನಿಮಾದ ಮೊದಲ ವಿಮರ್ಶೆ ಓದಿದ್ರೆ ನೀವು ಥ್ರಿಲ್​ ಆಗೋದು ಖಂಡಿತ!

KGF 2
Published on

ನವದೆಹಲಿ: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ನೋಡಲು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಏಪ್ರಿಲ್​ 14ರಂದು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯಲ್ಲೂ ಕೆಜಿಎಫ್​ ಚಾಪ್ಟರ್​ 2 ದಾಖಲೆ ಬರೆದಿದ್ದು, ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರವನ್ನು ಹಿಂದಿಕ್ಕಿದೆ. ಇನ್ನು ಚಿತ್ರ ಹೇಗಿರಲಿದೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇರಲಿದೆ. ಅದಕ್ಕೆ ಉತ್ತರ ಇಲ್ಲಿದೆ.

ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್​ ಸಂಧು ಕೆಜಿಎಫ್​ ಚಾಪ್ಟರ್​ 2 ಚಿತ್ರದ ಮೊದಲ ವಿಮರ್ಶೆಯನ್ನು ನೀಡಿದ್ದಾರೆ. ಚಿತ್ರವನ್ನು ಮೆಚ್ಚಿಕೊಂಡಿರುವ ಉಮೇರ್​, ವಿಶ್ವದರ್ಜೆಯ ಸಿನಿಮಾ ಎಂದು ಹಾಡಿ ಹೊಗಳಿದ್ದಾರೆ.

ಕೆಜಿಎಫ್​ ಚಾಪ್ಟರ್ 2 ಒಂದು ಹೈ ಆಕ್ಟೇನ್​ ಮನರಂಜನಾ ಮಸಾಲ ಸಿನಿಮಾ ಆಗಿದೆ. ನಿಮ್ಮ ಭರವಸೆಯನ್ನು ಖಂಡಿತ ಉಳಿಸಿಕೊಳ್ಳುತ್ತದೆ. ಈ ಚಿತ್ರ ನಿಮ್ಮನ್ನು ಸಂಪೂರ್ಣ ಮನರಂಜಿಸಲಿದೆ. ಬೆರಗುಗೊಳಿಸುವ ಸಾಹಸ, ಅಚ್ಚರಿಯ ಸ್ಥಳಗಳು ಮತ್ತು ಚಿತ್ರವನ್ನು ಸೊಗಸಾಗಿ ಪ್ರಸ್ತುತ ಪಡಿಸಿದ್ದಾರೆ. ಬಾಕ್ಸ್​ಆಫೀಸ್​ನಲ್ಲಿ ಈ ಸಿನಿಮಾಗೆ ವೀಕ್ಷಕರು ಅದ್ಧೂರಿ ಸ್ವಾಗತವನ್ನು ನೀಡಲಿದ್ದಾರೆ. ಯಶ್​ ಅವರ ನಟನೆ ಅದ್ಭುತವಾಗಿದ್ದು, ಈ ಚಿತ್ರ ಬ್ಲಾಕ್​ಬ್ಲಸ್ಟರ್​ ಆಗಲಿದೆ ಎಂದು ಹೇಳಿದ್ದಾರೆ.

ಕೆಜಿಎಫ್​ ಚಾಪ್ಟರ್​ 2 ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಪ್ರಿಲ್ 14 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕೆಜಿಎಫ್: ಚಾಪ್ಟರ್​ 2' ಅನ್ನು ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net