ಮುಂಬೈ: ಇತ್ತೀಚೆಗಷ್ಟೇ ತೆರೆಕಂಡಿದ್ದ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ನೆಲಕಚ್ಚಿದೆ. ಈ ವರ್ಷದ ದುರಂತ ಸಿನಿಮಾ ಎಂಬ ಹಣೆ ಪಟ್ಟಿಯನ್ನು ಹೊತ್ತುಕೊಂಡಿದೆ. ಧಾಕಡ್ ಸಿನಿಮಾ ಬಾಕ್ಸ್ ಆಫೀಸ್ ಫೈಟ್ನಲ್ಲಿ ಕಳೆದುಕೊಂಡು ಅಥವಾ ನಷ್ಟ ಮಾಡಿಕೊಂಡ ಮೊತ್ತ ಕೇಳಿದರೆ ನಿರ್ಮಾಪಕರು ಬೆಚ್ಚಿಬೀಳುವುದಂತೂ ಗ್ಯಾರೆಂಟಿ.
ಸಿನಿಮಾ ಬಿಡುಗಡೆಯಾಗಿ ಕೇವಲ 3 ಕೋಟಿ ರೂಪಾಯಿಗೂ ಕಡಿಮೆ ಮಾತ್ರ ಗಳಿಕೆ ಮಾಡಿದೆ. ಬಿಡುಗಡೆಯಾದ ಎರಡೇ ವಾರಕ್ಕೆ ಈ ಸಿನಿಮಾ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿದೆ. ಢಾಕಡ್, ಹಿಂದಿ ಚಿತ್ರರಂಗದ ಅತ್ಯಂತ ದುಬಾರಿ ಮಹಿಳಾ ನಾಯಕತ್ವದ ಚಲನಚಿತ್ರವಾಗಿದೆ. ಈ ಚಿತ್ರದಿಂದಾದ ನಷ್ಟವನ್ನು ಎಣಿಸಲು ಕುಳಿತರೆ, ಇದು ನಿರ್ಮಾಪಕರಿಗೆ ಆದ ಸಾರ್ವಕಾಲಿಕ ದೊಡ್ಡ ನಷ್ಟಗಳಲ್ಲಿ ಒಂದಾಗಿದೆ.
ಈ ಸಿನಿಮಾವನ್ನು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಚಾರದ ವೆಚ್ಚ ಮತ್ತು ಸಿನಿಮಾ ಬಿಡುಗಡೆಯ ಖರ್ಚು ಸೇರಿದರೆ ಒಟ್ಟು 80 ಕೋಟಿ ರೂ. ಆಗುತ್ತದೆ. ಇನ್ನು ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಮಕಾಡೆ ಮಲಗಿರುವುದರಿಂದ ಈ ಸಿನಿಮಾವನ್ನು ಕೊಳ್ಳಲು ಯಾವುದೇ ಒಟಿಟಿ ವೇದಿಕೆಯು ಸಹ ಮುಂದೆ ಬರುತ್ತಿಲ್ಲ. ಇದನ್ನು ಹೊರತಪಡಿಸಿದರೆ, ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು 5 ಕೋಟಿ ರೂ.ಗೆ ಮಾರಾಟವಾಗುವ ನಿರೀಕ್ಷೆಯಿದೆ.
ಒಟ್ಟಾರೆ ನಷ್ಟದ ವಿಚಾರಕ್ಕೆ ಬಂದರೆ, ನಿರ್ಮಾಪಕರ ಜೇಬಿನಿಂದ ಬರೋಬ್ಬರಿ 78 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ಇದು ಅತ್ಯಂತ ಭಾರೀ ನಷ್ಟದ ಮೊತ್ತ ಎನ್ನಲಾಗುತ್ತಿದೆ. ಕಂಗನಾ ನಂಬಿ ಬಂಡವಾಳ ಹೂಡಿದ ನಿರ್ಮಾಪಕ ಸ್ಥಿತಿ ಇದೀಗ ಹೇಳತೀರದ್ದಾಗಿದೆ.
ಈ ಸಿನಿಮಾವನ್ನು ರಝ್ನೀಶ್ ಗೈ ನಿರ್ದೇಶನ ಮಾಡಿದ್ದಾರೆ. ಕಂಗನಾ ರಣಾವತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ರಾಂಪಾಲ್, ದಿವ್ಯಾ ದತ್ತ ಮತ್ತು ಸಸ್ವತಾ ಚಟರ್ಜಿ ಧಾಕಡ್ ಸಿನಿಮಾದಲ್ಲಿದ್ದಾರೆ. (ಏಜೆನ್ಸೀಸ್)
ಸರ್ಕಾರಿ ನೌಕರಿ ತಂದಿಟ್ಟ ಸಂಕಟ: ಪ್ರಾಣಿಗೆ ಚಿಕಿತ್ಸೆ ಕೊಡಲು ಹೋದ ಪಶುವೈದ್ಯನಿಗೆ ಕಾದಿತ್ತು ಬಿಗ್ ಶಾಕ್!
PSI ನೇಮಕಾತಿ ಅಕ್ರಮ: ಮಧ್ಯವರ್ತಿಯಾಗಿದ್ದ ಆರೋಪದಡಿ ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಹರೀಶ್ ಬಂಧನ