30ಕ್ಕೂ ಹೆಚ್ಚು ನಂಬರ್​ಗಳನ್ನು ಬ್ಲಾಕ್​ ಮಾಡಿದ್ದೇನೆ: ಯುವಕನೊಬ್ಬನ ಕಿರುಕುಳವನ್ನು ಬಿಚ್ಚಿಟ್ಟ ನಿತ್ಯಾ!​

Nithya Menen
Published on

ಹೈದರಾಬಾದ್​: ನಟಿ ನಿತ್ಯಾ ಮೆನನ್​ ಹೆಸರು ಹೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್​, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.

ಇತ್ತೀಚೆಗೆ ನಿತ್ಯಾ ಮೆನನ್ ಅವರ 19 (1)(ಎ) ಸಿನಿಮಾ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿದೆ. ಇತ್ತೀಚೆಗೆ ಅವರ ಮದುವೆ ವಿಚಾರದಲ್ಲೂ ವದಂತಿ ಕೇಳಿಬಂದಿತ್ತು. ಆ ವಿಚಾರದ ಬಗ್ಗೆ ಸ್ವತಃ ನಿತ್ಯಾ ಅವರೇ ಸ್ಪಷ್ಟನೆ ನೀಡಿ, ಸದ್ಯಕ್ಕೆ ಮದುವೆ ಯೋಚನೆ ಇಲ್ಲ ಎಂದಿದ್ದರು. ಇದೀಗ​ ನಿತ್ಯಾ ಅವರು ನೋವಿನ ಸಂಗತಿಯೊಂದನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ.

ಸಿನಿಮಾ ವಿಮರ್ಶೆಗಳ ಮೂಲಕವೇ ಖ್ಯಾತಿ ಪಡೆದಿರುವ ಯುವಕನೊಬ್ಬನಿಂದ ತುಂಬಾ ಕಿರುಕುಳ ಅನುಭವಿಸಿರುವುದಾಗಿ ನಿತ್ಯಾ ಹೇಳಿಕೊಂಡಿದ್ದಾರೆ. ಸಹಿಸಲಾಗದಷ್ಟು ಕಿರುಕುಳವನ್ನು ಎದುರಿಸಿದ್ದೇನೆ. ಬಹಳ ಸಮಯದಿಂದಲೂ ಆತ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಆತ ವೈರಲ್​ ಆದ ಬಳಿಕ ಸಾರ್ವಜನಿಕವಾಗಿಯೇ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಬೇಸರ ಹೊರ ಹಾಕಿದರು.

ಆತನ ವಿರುದ್ಧ ದೂರು ನೀಡುವಂತೆ ಅನೇಕರು ಹೇಳಿದರು. ಆದರೆ, ಬೇಡ ಎಂದು ಸುಮ್ಮನಾಗಿದ್ದೇನೆ. ಕಳೆದ 6 ವರ್ಷಗಳಿಂದ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದಾನೆ. ನನ್ನ ಪಾಲಕರನ್ನು ಹೆಸರನ್ನು ಉಲ್ಲೇಖಿಸುವ ಮೂಲಕ ಅವರಿಗೆ ಹಿಂಸೆ ಕೊಟ್ಟಿದ್ದಾರೆ. ತುಂಬಾ ಕ್ರೂರವಾಗಿ ಮಾತನಾಡುತ್ತಿದ್ದಾನೆ. ಈವರೆಗೂ ಆತನ 30ಕ್ಕೂ ಹೆಚ್ಚು ನಂಬರ್​ಗಳನ್ನು ಬ್ಲಾಕ್​ ಮಾಡಿದ್ದೇನೆ. ಅವನನ್ನು ನಂಬುವವರು ಮತ್ತು ಆತನ ಮಾತುಗಳನ್ನು ನಂಬುವವರು ನಿಜವಾಗಿಯೂ ಮೂರ್ಖರು ಎಂದು ನಿತ್ಯಾ ಅಸಮಾಧಾನಾ ಹೊರಹಾಕಿದ್ದಾರೆ.

ಅಂದಹಾಗೆ ನಿತ್ಯಾ ಹೇಳುತ್ತಿರುವುದು ಸಂತೋಷ್​ ವಾರ್ಕಿ ಎಂಬ ಯುವಕನ ಬಗ್ಗೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಈತ ಸುದ್ದಿಯಾಗಿದ್ದ. ನಿತ್ಯಾ ಮೆನನ್​ರನ್ನು ತುಂಬಾ ಇಷ್ಟ ಪಡುತ್ತಿರುವ ಸಂತೋಷ್​, ಹಿಂದೊಮ್ಮೆ ಮದುವೆ ಆಗಲು ಅನುಮತಿ ಕೇಳಲು ಆಕೆಯ ಮನೆಗೆ ಹೋಗಿದ್ದರಂತೆ. ಇದುವರೆಗೂ ಮದುವೆ ಆಗುತ್ತೇನೆ ಅಂತಿದ್ದ ಸಂತೋಷ್​ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್​ ಮಾಡಿ, ನಿತ್ಯಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಾನು ಇನ್ನೆಂದಿಗೂ ನಿತ್ಯಾ ಮೆನನ್​ ಅವರನ್ನು ಮದುವೆ ಆಗುವುದಿಲ್ಲ. ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್​ ನಂಬರ್​ ಅನ್ನು ಕೊಡಬಹುದಿತ್ತು ಎಂದು ಬರೆದುಕೊಂಡಿದ್ದ.

ತನ್ನ ನಿಜವಾದ ಪ್ರೀತಿಯನ್ನು ಅರಿತುಕೊಳ್ಳದ ನಿತ್ಯಾ ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಡುತ್ತಾಳೆ. ಅವಳು ನನಗೆ ಅರ್ಹಳಲ್ಲ ಎಂದು ಪೋಸ್ಟ್ ಮೂಲಕ ನಿತ್ಯಾರನ್ನು ಸಂತೋಷ್​ ಟೀಕಿಸಿದ್ದರು.

ಅಂದಹಾಗೆ ಸಂತೋಷ್​​ ವಾರ್ಕಿ ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಮುಖ. ಅವರು ಮೋಹನ್​ಲಾಲ್​ ಅಭಿಮಾನಿಯಾಗಿದ್ದು, ಆಗಾಗ ಅವರು ಸಿನಿಮಾಗಳ ಬಗ್ಗೆ ಕೊಡುವ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಇದೀಗ ನಿತ್ಯಾ, ಈತನ ಬಗ್ಗೆಯೇ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net