ಐಸಿಯುನಲ್ಲಿ ರಿಜ್ವಾನ್​ ಕೋರಿಕೆ ನೆರವೇರಿಸಿಕೊಟ್ಟ ಭಾರತೀಯ ವೈದ್ಯ: ಪಾಕ್​ ಆಟಗಾರನಿಂದ ಸಿಕ್ತು ಉಡುಗೊರೆ

Doctor
Published on

ದುಬೈ: ಟಿ20 ವಿಶ್ವಕಪ್ ಸೆಮೀಸ್‌ನಲ್ಲಿ ಆಸೀಸ್ ವಿರುದ್ಧ 67 ರನ್ ಸಿಡಿಸಿ ಪಾಕ್ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾಗಿದ್ದ ವಿಕೆಟ್ ಕೀಪರ್-ಆರಂಭಿಕ ಆಟಗಾರ ಮೊಹಮದ್ ರಿಜ್ವಾನ್, ಪಂದ್ಯಕ್ಕೆ ಮುನ್ನ 2 ದಿನಗಳನ್ನು ಐಸಿಯುನಲ್ಲಿ ಕಳೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಇದೇ ವಿಚಾರವಾಗಿ ಮತ್ತೊಂದು ಇಂಟೆರೆಸ್ಟಿಂಗ್​ ಸಂಗತಿ ಹೊರಬಿದ್ದಿದೆ.

ಐಸಿಯುನಲ್ಲಿದ್ದ ರಿಜ್ವಾನ್​ ಶೀಘ್ರ ಗುಣವಾಗಲು ಭಾರತೀಯ ವೈದ್ಯರೊಬ್ಬರು ಕಾರಣ ಎಂದು ತಿಳಿದುಬಂದಿದೆ. ಸಮಿಫೈನಲ್​ಗೆ ಎರಡು ದಿನಗಳು ಬಾಕಿ ಇರುವಾಗಲೇ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಿಜ್ವಾನ್,​ ದುಬೈನ ಬುರ್ಜುಮನ್​ ಬಳಿ ಇರುವ ಮೆಡಿಯೋರ್ ಆಸ್ಪತ್ರೆಯ ಐಸಿಯು ಘಟಕಕ್ಕೆ ದಾಖಲಾಗಿದ್ದರು. ​

ಸುಮಾರು 35 ಗಂಟೆಗಳ ಕಾಲ ರಿಜ್ವಾನ್​, ಐಸಿಯುನಲ್ಲಿದ್ದರು. ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಕೋವಿಡ್​ ನೆಗಿಟಿವ್​ ಇರುವುದು ಪರೀಕ್ಷೆಯಲ್ಲಿ ದೃಢವಾಗಿತ್ತು. ತೀವ್ರ ಎದೆ ನೋವು ಹಿನ್ನೆಲೆಯಲ್ಲಿ ಐಸಿಯುನಲ್ಲಿ ಇರಿಸಲಾಗಿತ್ತು. ಈ ವೇಳೆ ರಿಜ್ವಾನ್​​ ಬೇಗ ಗುಣಮುಖರಾಗಲು ನೆರವಾಗಿದ್ದು, ಭಾರತೀಯ ಮೂಲದ ಮೆಡಿಯೋರ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ.ಶಹೀರ್ ಸೈನಾಲಾಬ್ದೀನ್ ಅವರು.

ನಾನು ತಂಡದಲ್ಲಿ ಆಡಲೇಬೇಕು. ಏನೇ ಆದರೂ ನಾನು ತಂಡವನ್ನು ಸೇರಿಕೊಳ್ಳಲೇಬೇಕು ಎಂದು ವೈದ್ಯರ ಬಳಿ ರಿಜ್ವಾನ್​ ಕೇಳಿಕೊಂಡಿದ್ದರು. ಆದರೆ, ರಿಜ್ವಾನ್​, ಗಂಭೀರ ಎದೆ ಸೋಂಕಿನಿಂದ ಬಳಲುತ್ತಿದ್ದರು. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಗುಣವಾಗಲು 5 ರಿಂದ 7 ದಿನಗಳು ತೆಗೆದುಕೊಳ್ಳುತ್ತದೆ. ಆದರೆ, 2 ದಿನಗಳಲ್ಲಿ ಚೇತರಿಕೆಗೊಳ್ಳುವುದು ಕಷ್ಟದ ವಿಯವಾಗಿತ್ತು. ಆದರೆ, ರಿಜ್ವಾನ್​ ಅಷ್ಟು ಬೇಗ ಗುಣವಾಗಿದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದೆ ಎಂದು ಡಾ.ಶಹೀರ್ ಸೈನಾಲಾಬ್ದೀನ್ ಹೇಳಿದ್ದಾರೆ. ಅಲ್ಲದೆ, ರಿಜ್ವಾನ್​ ಬೇಗ ಚೇತರಿಸಿಕೊಳ್ಳಲು ನೆರವಾಗುವ ಮೂಲಕ ಅವರಿಗೆ ನೆರವಾದರು.

ರಿಜ್ವಾನ್ ಅವರು ಧೈರ್ಯಶಾಲಿ ಮತ್ತು ದೃಢನಿಶ್ಚಯದಿಂದ ಇದ್ದರು. ಕ್ರೀಡಾಪಟುವಾಗಿ ಅವರ ದೈಹಿಕ ಸಾಮರ್ಥ್ಯ ಮತ್ತು ಪರಿಶ್ರಮವು ರಿಜ್ವಾನ್ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಡಾ. ಸೈನಾಲಾಬ್ದೀನ್ ಹೇಳಿದರು. ಮೊಹಮ್ಮದ್ ರಿಜ್ವಾನ್ ಅವರು ತಮ್ಮ ಹಸ್ತಾಕ್ಷರವಿರುವ ಜೆರ್ಸಿಯನ್ನು ಡಾ. ಸೈನಾಲಾಬ್ದೀನ್ ಅವರಿಗೆ ಹಸ್ತಾಂತರಿಸಿ ಅವರು ಶೀಘ್ರವಾಗಿ ಚೇತರಿಸಿಕೊಂಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net