

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಜತೆಗಿನ ವೈವಾಹಿಕ ಸಂಬಂಧಕ್ಕೆ ಬ್ರೇಕ್ ಹಾಕಿ, ಡಿವೋರ್ಸ್ ಘೋಷಣೆ ಮಾಡಿದಾಗಿನಿಂದ ನಟ ಧನುಷ್ ಆಗಾಗ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ.
ಧನುಷ್ ಅವರು ಸೆಲ್ವರಾಘವನ್ ನಿರ್ದೇಶನದ "ನಾನೇ ವರುವೆನ್" ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಊಟಿಯಲ್ಲಿ ಬೀಡುಬಿಟ್ಟಿತ್ತು. ಈ ವೇಳೆ ಹಿರಿಯ ಮಗ ಯಾತ್ರ ಜತೆ ಶೂಟಿಂಗ್ ಸೆಟ್ನಲ್ಲಿ ತೆಗೆದ ಫೋಟೋವನ್ನು ಧನುಷ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಫೋಟೋ ವೈರಲ್ ಆಗಿತ್ತು.
ಇದೀಗ ಧನುಷ್ ಹೈದರಾಬಾದ್ಗೆ ವಾಪಸ್ಸಾಗಿದ್ದು, ವೆಂಕಿ ಅಟ್ಲುರಿ ನಿರ್ದೇಶನದ ತೆಲುಗು/ತಮಿಳು/ಹಿಂದಿ ತ್ರಿಭಾಷ ಸಿನಿಮಾದ ಶೂಟಿಂಗ್ಗಾಗಿ ಹೈದರಾಬಾದ್ನಲ್ಲಿ ಬೀಡುಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಧನುಷ್ಗೆ ಸಂಯುಕ್ತ ಮೆನನ್ ನಾಯಕಿಯಾಗಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ಧನುಷ್ ಇತ್ತೀಚೆಗಷ್ಟೇ ಹೈದರಾಬಾದ್ನ 1980 ಮಿಲಿಟರಿ ಹೋಟೆಲ್ನಲ್ಲಿ ಊಟಕ್ಕೆಂದು ಭೇಟಿ ನೀಡಿದ್ದರು. ಕಪ್ಪು ಬಣ್ಣದ ಹೂಡಿ ಮತ್ತು ಅದೇ ಬಣ್ಣದ ಕ್ಯಾಪ್ ಧರಿಸಿ ಊಟ ಸವಿಯುತ್ತಿರುವ ಫೋಟೋ ವೈರಲ್ ಆಗಿದೆ. ಆದರೆ, ಅದೇ ಫೋಟೋದಲ್ಲಿ ಧನುಷ್ ಪಕ್ಕ ಯುವತಿಯೊಬ್ಬಳು ಕುಳಿತಿದ್ದು, ಆಕೆ ಯಾರಿರಬಹುದು ಎಂಬ ಕುತೂಹಲವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಆದರೆ, ಈ ಪ್ರಶ್ನೆಗೆ ಈವರೆಗೂ ಉತ್ತರ ದೊರೆತಿಲ್ಲ. ಆದರೆ, ಫೋಟೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಧನುಷ್ ಮತ್ತು ಮಾಳವಿಕಾ ಮೋಹನನ್ ನಟಿಸಿರುವ 'ಮಾರನ್' ಮತ್ತು ಹಾಲಿವುಡ್ ಚೊಚ್ಚಲ ಸಿನಿಮಾ 'ದಿ ಗ್ರೇ ಮ್ಯಾನ್' ಹಾಗೂ ಸನ್ ಪಿಕ್ಚರ್ಸ್ ನಿರ್ಮಿಸಿರುವ 'ತಿರುಚಿರಂಬಲಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್)