

ಚಾಗುರಾಮಾಸ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಬಿರುಸಿನ ಪ್ರದರ್ಶನದ ಮೂಲಕ ಯೂನಿವರ್ಸ್ ಬಾಸ್ ಎಂಬುದನ್ನು ಕ್ರಿಸ್ ಗೇಲ್ ನಿರೂಪಿಸಿದ್ದಾರೆ. ಸೋಮವಾರ ಸೆಂಟ್ ಲೂಸಿಯಾದ ಗ್ರಾಸ್ ಐಸ್ಲೆಟ್ನ ಡರೇನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅರ್ಧ ಶತಕದೊಂದಿಗೆ ಗೇಲ್, ತಂಡಕ್ಕೆ ಗೆಲವು ತಂದುಕೊಟ್ಟರು.
ಸ್ವಯಂ ಘೋಷಿತ ಯೂನಿವರ್ಸ್ ಬಾಸ್ ಗೇಲ್ ಕೇವಲ 38 ಎಸೆತಗಳಲ್ಲಿ 67 ರನ್ಗಳಿಸಿದರು. ಅಲ್ಲದೆ, ಟಿ20 ಮಾದರಿ ಪಂದ್ಯಗಳಲ್ಲಿ 14 ಸಾವಿರ ರನ್ ಕಲೆಹಾಕಿದ ವಿಶ್ವದ ಮೊಟ್ಟ ಮೊದಲ ಆಟಗಾರನೆಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ಕೇವಲ 14.5 ಓವರ್ಗಳಲ್ಲೇ ಆಸಿಸ್ ಪಡೆ ನೀಡಿದ್ದ 142 ಗುರಿಯನ್ನು ಸುಲಭವಾಗಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಪಡೆ 6 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ವಿಂಡೀಸ್ ಪಡೆ ಸರಣಿ ಜಯಿಸಿದ್ದು, ವೈಟ್ವಾಶ್ ಮಾಡುವ ಗುರಿ ಇಟ್ಟುಕೊಂಡಿದೆ.
ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಮಾತನಾಡಿದ ಗೇಲ್, ಬ್ಯಾಟ್ ಮೇಲೆ ಯೂನಿವರ್ಸ್ ಬಾಸ್ ಎಂದು ಬರೆದುಕೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಯಾಕೆ ಅನುಮತಿ ನೀಡುತ್ತಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ನಾನು ಯೂನಿವರ್ಸ್ ಬಾಸ್ ಅನ್ನು ಬಳಸಬೇಕೆಂದು ಐಸಿಸಿ ಬಯಸುವುದಿಲ್ಲ. ಹೀಗಾಗಿ ನಾನು ಅದನ್ನು ಚಿಕ್ಕದಾಗಿ ದಿ ಬಾಸ್ ಎಂದು ಬರೆದುಕೊಂಡಿದ್ದೇನೆ. ನಾನೇ ಬಾಸ್ ಎಂದು ಗೇಲ್ ತುಸು ನಕ್ಕರು.
‘ಯೂನಿವರ್ಸ್ ಬಾಸ್’ ಪದದ ಮೇಲೆ ಐಸಿಸಿಗೆ ಹಕ್ಕುಸ್ವಾಮ್ಯವಿದೆಯೇ ಎಂದು ಕೇಳಿದಾಗ, "ನಿಜ ಹೇಳಬೇಕೆಂದರೆ ಹಕ್ಕುಸ್ವಾಮ್ಯವನ್ನು ನಾನು ಹೊಂದಿರಬೇಕಿತ್ತು, ಐಸಿಸಿ ಅಲ್ಲ, ತಾಂತ್ರಿಕವಾಗಿ ನಾನೇ ಬಾಸ್" ಅನ್ನುವ ಮೂಲಕ ಐಸಿಸಿಗೆ ಶಾಕ್ ನೀಡಿದರು. ಗೇಲ್ ಅವರ ಈ ಹೇಳಿಕೆಗಳು ಅವರ ಆತ್ಮವಿಶ್ವಾಸದ ಪ್ರಮಾಣವನ್ನು ಹೇಳುವಂತಿತ್ತು. (ಏಜೆನ್ಸೀಸ್)