More

    ಒಲಿಂಪಿಕ್ಸ್ ಪದಕ ಬೇಟೆಗಾರರು; ಏರಿಳಿತದಲ್ಲಿ ಸಾಗಿ ಬಂದಿದೆ ಭಾರತದ ಪದಕ ಪಟ್ಟಿ..

    ಒಲಿಂಪಿಕ್ಸ್​ನಂಥ ಕ್ರೀಡಾಕೂಟಗಳಲ್ಲಿ ಪದಕ ಜಯಿಸುವುದೇ ಭಾರತೀಯ ಕ್ರೀಡಾಪಟುಗಳ ಪಾಲಿಗೆ ದೊಡ್ಡ ಕನಸಾಗಿದೆ. ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಕ್ರೀಡಾಹಬ್ಬದಲ್ಲಿ ಅಪಾರ ನಿರೀಕ್ಷೆಗಳೊಂದಿಗೆ ತೆರಳುವ ಭಾರತದ ಕ್ರೀಡಾಪಟುಗಳಿಗೆ ನಿರಾಸೆ ಎದುರಾಗುವುದೇ ಹೆಚ್ಚು. ಆದರೂ ವಿಶ್ವ ಮಟ್ಟದಲ್ಲಿ ಸ್ಪರ್ಧೆ ನೀಡುವುದರಲ್ಲಿ ಭಾರತೀಯರು ಎಂದೂ ಹಿಂಜರಿದಿಲ್ಲ. 1980ರಿಂದ ಈಚೆಗೆ ಪುರುಷರ ಹಾಕಿ ತಂಡ ಪದಕ ಗೆಲ್ಲಲು ವಿಫಲವಾಗಿದ್ದರೂ 8 ಬಾರಿ ಸ್ವರ್ಣ ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ಇದುವರೆಗೆ ಒಮ್ಮೆಯೂ ಒಂದೇ ಒಲಿಂಪಿಕ್ಸ್​ನಲ್ಲಿ ಎರಡಂಕಿ ಪದಕ ಜಯಿಸಲು ಭಾರತ ಸಫಲವಾಗಿಲ್ಲ. ಟೋಕಿಯೊದಲ್ಲಿ ಆ ಕನಸು ನನಸಾಗುವ ನಿರೀಕ್ಷೆಯೊಂದಿಗೆ, ಹಿಂದಿನ ಕ್ರೀಡಾಕೂಟಗಳಲ್ಲಿ ಭಾರತೀಯರ ಪದಕ ಸಾಧನೆಯ ಹಿನ್ನೋಟ ಇಲ್ಲಿದೆ.

    8 ಸ್ವರ್ಣ ಗೆದ್ದಿರುವ ಭಾರತ ಹಾಕಿ ತಂಡ

    ಭಾರತ ಪುರುಷರ ಹಾಕಿ ತಂಡ ದಾಖಲೆಯ 8 ಸ್ವರ್ಣ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಜಯಿಸಿದೆ. 1928ರಿಂದ 1956ರವರೆಗೆ ಸತತ 6 ಬಾರಿ ಸ್ವರ್ಣ ಜಯಿಸಿತ್ತು. ಬಳಿಕ 1960ರ ರೋಮ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದರೆ, 1964ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮತ್ತೆ ಸ್ವರ್ಣ ಗೆದ್ದುಕೊಂಡಿತ್ತು. 1968ರ ಮೆಕ್ಸಿಕೊ ಹಾಗೂ 1972ರ ಮ್ಯೂನಿಚ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟು ಕೊಂಡಿತ್ತು. 1976ರ ಮಾಂಟ್ರಿಯಲ್ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿ ಬರಿಗೈಲಿ ವಾಪಸಾಗಿತ್ತು. 1980ರ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ವಿ.ಭಾಸ್ಕರನ್ ಸಾರಥ್ಯದ ಭಾರತ ತಂಡ 8ನೇ ಬಾರಿ ಚಿನ್ನದ ಪದಕ ಜಯಿಸಿತ್ತು.

    ಪ್ರಿಚರ್ಡ್​ಗೆ ಅವಳಿ ಪದಕ

    ಸ್ವಾತಂತ್ರ್ಯಕ್ಕೂ ಮುನ್ನ 1900ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ರಿಟನ್ ಅಥ್ಲೀಟ್ ನಾರ್ಮನ್ ಪ್ರಿಚರ್ಡ್ 200 ಮೀಟರ್ ಓಟ ಹಾಗೂ 200 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕೋಲ್ಕತದಲ್ಲಿ ಜನಿಸಿದ್ದ ಪ್ರಿಚರ್ಡ್ ಒಲಿಂಪಿಕ್ಸ್ ಯಶಸ್ಸಿನ ಬಳಿಕ 1905ರಲ್ಲಿ ಕಾಯಂ ಆಗಿ ಬ್ರಿಟನ್​ಗೆ ಮರಳಿದ್ದರು. ಅವರು ಏಷ್ಯಾದಲ್ಲಿ ಜನಿಸಿ ಒಲಿಂಪಿಕ್ಸ್ ಪದಕ ಗೆದ್ದ ಮೊದಲ ಕ್ರೀಡಾಪಟುವೂ ಆಗಿದ್ದಾರೆ. ಭಾರತೀಯರಲ್ಲದಿದ್ದರೂ, ಅವರು ಗೆದ್ದ ಪದಕ ಭಾರತದ್ದೇ ಆಗಿ ಪರಿಗಣಿಸಲ್ಪಡುತ್ತದೆ.

    ಒಲಿಂಪಿಕ್ಸ್ ಪದಕ ಬೇಟೆಗಾರರು; ಏರಿಳಿತದಲ್ಲಿ ಸಾಗಿ ಬಂದಿದೆ ಭಾರತದ ಪದಕ ಪಟ್ಟಿ..1952-ಹೆಲ್ಸಿಂಕಿ: ಕೆ.ಡಿ. ಜಾಧವ್ (ಕುಸ್ತಿ, ಕಂಚು)

    ಒಲಿಂಪಿಕ್ಸ್ ಇತಿಹಾಸದಲ್ಲಿ ಸ್ವತಂತ್ರ ಭಾರತದ ಕ್ರೀಡಾಪಟು ವೈಯಕ್ತಿಕ ವಿಭಾಗದಲ್ಲಿ ಜಯಿಸಿದ ಮೊದಲ ಪದಕ ಇದಾಗಿದೆ. ಮಹಾರಾಷ್ಟ್ರದ ಖಾಸಾಬಾ ದಾದಾಸಾಹೇಬ್ ಜಾಧವ್, ಕುಸ್ತಿಯ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚು ಜಯಿಸಿದ್ದರು. ಹೆಲ್ಸಿಂಕಿ ಕ್ರೀಡಾಕೂಟದಲ್ಲಿ ಕೆಡಿ ಜಾಧವ್ ಕಂಚು ಗೆದ್ದಿದ್ದರೆ, ಕೆಡಿ ಸಿಂಗ್ ಸಾರಥ್ಯದ ಭಾರತ ಹಾಕಿ ತಂಡ ಸ್ವರ್ಣ ಜಯಿಸಿತ್ತು.

    1996-ಅಟ್ಲಾಂಟ: ಲಿಯಾಂಡರ್ ಪೇಸ್ (ಟೆನಿಸ್, ಕಂಚು)

    ಅಮೆರಿಕದ ಅಟ್ಲಾಂಟದಲ್ಲಿ ನಡೆದ ಕ್ರೀಡಾಕೂಟ ದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್ ಪೇಸ್ ಟೆನಿಸ್​ನ ಸಿಂಗಲ್ಸ್ ವಿಭಾಗದಲ್ಲಿ ಕಂಚು ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 44 ವರ್ಷಗಳ ಬಳಿಕ ಭಾರತಕ್ಕೆ ದಕ್ಕಿದ ಪದಕ ಇದಾಗಿತ್ತು. ಲಿಯಾಂಡರ್ ಪೇಸ್ ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಬ್ರೆಜಿಲ್​ನ ಫೆರ್ನಾಂಡೊ ಮೆಲಿಗೆನಿ ಅವರನ್ನು ಮಣಿಸಿದ್ದರು.

    2000- ಸಿಡ್ನಿ: ಕರ್ಣಂ ಮಲ್ಲೇಶ್ವರಿ (ವೇಟ್​ಲಿಫ್ಟಿಂಗ್, ಕಂಚು)

    ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಕೂಟದಲ್ಲಿ ಆಂಧ್ರಪ್ರದೇಶದ ಕರ್ಣಂ ಮಲ್ಲೇಶ್ವರಿ ವೇಟ್​ಲಿಫ್ಟಿಂಗ್​ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಗೆದ್ದಿದ್ದು ಕಂಚಿನ ಪದಕವೇ ಆಗಿದ್ದರೂ ಅದು ಚಿನ್ನಕ್ಕಿಂತಲೂ ಅಮೂಲ್ಯವೆನಿಸಿತ್ತು. ಒಲಿಂಪಿಕ್ಸ್​ನಲ್ಲಿ ಪದಕ ಜಯಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಈ ಸಾಧನೆ ಮಾಡಿದ್ದರು.

    2004- ಅಥೆನ್ಸ್: ರಾಜ್ಯವರ್ಧನ್ ಸಿಂಗ್ ರಾಥೋಡ್ (ಶೂಟಿಂಗ್, ಬೆಳ್ಳಿ)

    ಗ್ರೀಸ್​ನ ಅಥೆನ್ಸ್​ನಲ್ಲಿ ನಡೆದ ಕ್ರೀಡಾಕೂಟದಲ್ಲೂ ಭಾರತ ಏಕೈಕ ಪದಕ ಜಯಿಸಲಷ್ಟೇ ಶಕ್ತವಾಗಿತ್ತು. ಹಿಂದಿನ ಎರಡು ಒಲಿಂಪಿಕ್ಸ್​ಗಳಲ್ಲಿ ಕಂಚು ಗೆದ್ದಿದ್ದರೆ, ಇಲ್ಲಿ ಬೆಳ್ಳಿ ಪದಕದ ಬಡ್ತಿ ಲಭಿಸಿತ್ತು. ರಾಜಸ್ಥಾನದ ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಪುರುಷರ ಡಬಲ್ ಟ್ರಾ್ಯಪ್ ವಿಭಾಗದಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿದರು. ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ವಿಭಾಗದ ರಜತ ಗೆದ್ದ ಮೊದಲ ಭಾರತೀಯರೆನಿಸಿದ್ದರು.

    2008- ಬೀಜಿಂಗ್: ಬಿಂದ್ರಾ ಸ್ವರ್ಣ ಸಂಭ್ರಮ

    ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಕೂಟ ಇದಾಗಿದೆ. ಸ್ವತಂತ್ರ ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ವರ್ಣ ಪದಕ ಚೀನಾದ ಬೀಜಿಂಗ್​ನಲ್ಲಿ ಒಲಿದಿತ್ತು. ಅಲ್ಲದೆ,ಮೊಟ್ಟ ಮೊದಲ ಬಾರಿಗೆ ಒಂದೇ ಕೂಟದಲ್ಲಿ 3 ಪದಕಗಳು ಭಾರತದ ಪಾಲಾಗಿದ್ದವು. ಅಭಿನವ್ ಬಿಂದ್ರಾ ಶೂಟಿಂಗ್​ನ 10 ಮೀಟರ್ ಏರ್ ರೈಫಲ್​ನಲ್ಲಿ ಸ್ವರ್ಣ ಗೆದ್ದು ಇತಿಹಾಸ ನಿರ್ವಿು ಸಿದ್ದರು. ಇದು ಭಾರತೀಯ ಶೂಟಿಂಗ್ ಕ್ಷೇತ್ರದ ದಿಕ್ಕನ್ನೇ ಬದಲಿಸಿತ್ತು. ಸುಶೀಲ್ ಕುಮಾರ್ ಪುರುಷರ ಕುಸ್ತಿಯ 75 ಕೆಜಿ ವಿಭಾಗದಲ್ಲಿ ಕಂಚು ಗೆದ್ದರೆ, ಬಾಕ್ಸಿಂಗ್​ನಲ್ಲಿ ವಿಜೇಂದರ್ ಸಿಂಗ್ 66 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು.

    2012- ಲಂಡನ್: ಅರ್ಧ ಡಜನ್ ಪದಕ ಸಂಭ್ರಮ

    ಭಾರತದ ಶೂಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಹೊಸ ಆಯಾಮ ಸೃಷ್ಟಿಸಿದ ಕೂಟ ಇದಾಗಿತ್ತು. 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಭಾರತದ ಪಾಲಾದವು. ಶೂಟಿಂಗ್​ನಲ್ಲಿ ವಿಜಯ್ ಕುಮಾರ್, 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್​ನಲ್ಲಿ ಬೆಳ್ಳಿ ಗೆದ್ದರೆ, ಸುಶೀಲ್ ಕುಮಾರ್ ಪುರುಷರ 66 ಕೆಜಿ ಫ್ರೀ ಸ್ಟೈಲ್​ನಲ್ಲಿ ರಜತ ಸಾಧನೆಯೊಂದಿಗೆ ಸತತ 2ನೇ ಬಾರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಜಯಿಸಿದರು. ಮತ್ತೋರ್ವ ಶೂಟರ್ ಗಗನ್ ನಾರಂಗ್ (10 ಮೀ ಏರ್ ರೈಫಲ್), ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬಾಕ್ಸರ್ ಮೇರಿ ಕೋಮ್ ಹಾಗೂ ಮತ್ತೋರ್ವ ಕುಸ್ತಿಪಟು ಯೋಗೇಶ್ವರ್ ದತ್ ಕಂಚಿನ ಪದಕ ಜಯಿಸಿದ್ದರು.

    2016-ರಿಯೋ: ಪಿವಿ ಸಿಂಧು ಇತಿಹಾಸ

    ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿ ಮಿಂಚಿದ್ದರು. ಸಿಂಧು ಬ್ಯಾಡ್ಮಿಂಟನ್​ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಷಟ್ಲರ್ ಎನಿಸಿಕೊಂಡರು.

    ನಟ ದರ್ಶನ್​ ಪ್ರಕರಣದಲ್ಲಿ ಟ್ವಿಸ್ಟ್​: ಕೇಳಿ ಬಂತು ಮತ್ತೊಂದು ಹೆಸರು ನಂದಿತಾ!

    ಆಟವಾಡುತ್ತ ಗೋಲಿ ನುಂಗಿ ಪ್ರಾಣ ಕಳೆದುಕೊಂಡಿತು 14 ತಿಂಗಳ ಮಗು…

    ಮದುವೆಯಾಗಿದ್ದರೂ ಇನ್ನೊಬ್ಬರ ಜತೆ ಪ್ರೇಮ: ಮನೆಬಿಟ್ಟು ಬಂದವರ ಪರಿಸ್ಥಿತಿ ಗಂಭೀರ

    ದೇಶದ ಪ್ರಪ್ರಥಮ ಕೋವಿಡ್​ ಸೋಂಕಿತೆಗೆ ಈಗ ಮತ್ತೆ ಕರೊನಾ!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts